ಸಂಸತ್ ಭವನದ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರ ನಡುವೆ ತಳ್ಳಾಟ, ನೂಕಾಟ ನಡೆದು ಹೈಡ್ರಾಮಾ ನಡೆದ ಘಟನೆಯಲ್ಲಿ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾಲಿಗೆ ಗಾಯವಾಗಿದೆ.
ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ಸದನದಲ್ಲಿ ಅಂಬೇಡ್ಕರ್ ಹೆಸರು ಬಳಸುವುದು ಈಗ ಫ್ಯಾಷನ್ ಆಗಿಬಿಟ್ಟಿದೆ. ಅಂಬೇಡ್ಕರ್, ಅಂಬೇಡ್ಕರ್ ಅಂತ ಜಪ ಮಾಡುವ ಬದಲು ದೇವರನ್ನು ಜಪಿಸಿದ್ದರೆ 7 ಜನ್ಮಗಳ ಕಾಲ ಸ್ವರ್ಗ ಸಿಗುತ್ತಿತ್ತು ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಸಂಸತ್ ಆವರಣದಲ್ಲಿ ಎರಡನೇ ದಿನ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘರ್ಷಣೆ ನಡೆದಿದೆ.
ಗುರುವಾರ ಬೆಳಿಗ್ಗೆ ಕಾಂಗ್ರೆಸ್ ಸಂಸದರು ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಜಾಗಕ್ಕೆ ಏಕಾಏಕಿ ಬಿಜೆಪಿ ಸಂಸದರ ನೇತೃತ್ವದಲ್ಲಿ ಕಾರ್ಯಕರ್ತರು ನುಗ್ಗಿದ್ದರಿಂದ ಎರಡೂ ಪಕ್ಷಗಳ ನಡುವೆ ತಳ್ಳಾಟ- ನೂಕಾಟ ನಡೆದಿದೆ.
ಬಿಜೆಪಿಯ ಇಬ್ಬರು ಸಂಸದರಿಗೆ ಗಾಯವಾಗಿದೆ ಎಂದು ವರದಿ ಆಗಿತ್ತು. ಇದರ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಕೂಡ ತಮ್ಮ ಮೇಲೂ ಹಲ್ಲೆ ನಡೆದಿದ್ದು, ನನ್ನ ಕಾಲಿಗೆ ಪೆಟ್ಟಾಗಿದೆ. ಇದು ನನ್ನ ಮೇಲೆ ನಡೆದ ವೈಯಕ್ತಿಕ ಹಲ್ಲೆ ಅಲ್ಲ, ಬದಲಾಗಿ ರಾಜ್ಯಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷರ ಮೇಲೆ ನಡೆದ ಹಲ್ಲೆ ಎಂದು ಲೋಕಸಭಾ ಸ್ಪೀಕರ್ ಗೆ ಪತ್ರ ಬರೆದು ಆರೋಪಿಸಿದ್ದಾರೆ.
ಬಿಜೆಪಿ ಸಂಸದರು ನನ್ನನ್ನು ಬಲವಂತವಾಗಿ ತಳ್ಳಿ ನೆಲದ ಮೇಲೆ ಕೂರುವಂತೆ ಒತ್ತಡ ಹಾಕಿದ್ದಾರೆ. ಇದರಿಂದ ಶಸ್ತ್ರಚಿಕಿತ್ಸೆ ಆಗಿದ್ದ ನನ್ನ ಕಾಲಿಗೆ ಮತ್ತೆ ಪೆಟ್ಟು ಬಿದ್ದಿದೆ. ಇದೇ ವೇಳೆ ಕಾಂಗ್ರೆಸ್ ಸಂಸದರೊಬ್ಬರು ನನಗೆ ಕೆಳಗೆ ಕೂರಲು ಆಗದೇ ಇರುವುದನ್ನು ಗಮನಿಸಿ ಚೇರ್ ತಂದರು. ಆದರೆ ಅದರ ಮೇಲೂ ಕೂರಲು ಕಷ್ಟವಾಯಿತು ಎಂದು ಖರ್ಗೆ ಸ್ಪೀಕರ್ ಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
82 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರಿಗೆ 2017 ಜೂನ್ ತಿಂಗಳಲ್ಲಿ ಮಂಡಿ ನೋವಿಗಾಗಿ ಶಸ್ತ್ರಚಿಕಿತ್ಸೆಗೆ ಮಾಡಲಾಗಿತ್ತು.
ಇದೇ ವೇಳೆ ರಾಹುಲ್ ಗಾಂಧಿ ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳಲು ಯತ್ನಿಸಿದಾಗ ಬಿಜೆಪಿ ಮುಖಂಡರು ಅಡ್ಡಿಪಡಿಸಿದಾಗ ರಾಹುಲ್ ಅವರನ್ನು ತಳ್ಳಿಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರ ತಲೆಗೆ ಪೆಟ್ಟಾಗಿದೆ.
ರಾಹುಲ್ ಗಾಂಧಿ ತಳ್ಳಿದ್ದರಿಂದ ಒಬ್ಬ ಸಂಸದ ನನ್ನ ಮೇಲೆ ಬಿದ್ದಿದ್ದರಿಂದ ಕೆಳಗೆ ಬಿದ್ದ ನನಗೆ ಗಾಯವಾಗಿದೆ ಎಂದು ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಮುಖಂಡರು ಸಂಸದನ ಮೇಲೆ ರಾಹುಲ್ ಗಾಂಧಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. ನಾನು ಅಧಿವೇಶನಕ್ಕೆ ತೆರಳುತ್ತಿದ್ದಾಗ ನನ್ನನ್ನು ಕೆಲವು ಬಿಜೆಪಿ ಮುಖಂಡರು ಒಳಗೆ ಹೋಗದಂತೆ ತಡೆದರು. ಸಂಸದನಾಗಿ ಅಧಿವೇಶನಕ್ಕೆ ಹೋಗುವುದು ನನ್ನ ಹಕ್ಕು. ಆದ್ದರಿಂದ ಅವರನ್ನು ತಳ್ಳಿ ಒಳಗೆ ಹೋಗಲು ಯತ್ನಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸಂಸದರು ಗುರುವಾರ ಬೆಳಿಗ್ಗೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ಜಾಗಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರು ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳದಂತೆ ತಡೆಯಲು ಯತ್ನಿಸಿದರು. ಇದರಿಂದ ಎರಡೂ ಪಕ್ಷಗಳ ನಡುವೆ ನೂಕಾಟ, ತಳ್ಳಾಟ ನಡೆದಿದ್ದು, ಗೊಂದಲದ ವಾತಾವರಣ ನಿರ್ಮಾಣವಾಯಿತು.