ಡ್ಯಾನ್ಸ್ ಕಾರ್ಯಕ್ರಮದ ವೇಳೆ ವೇದಿಕೆ ಕುಸಿದು 15 ಅಡಿ ಮೇಲಿಂದ ಬಿದ್ದ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಅವರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಕೇರಳದ ಕೊಚ್ಚಿಯಲ್ಲಿ ಸಂಭವಿಸಿದ್ದು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಚ್ಚಿಯ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಡ್ಯಾನ್ಸ್ ಕಾರ್ಯಕ್ರಮದ ವೇಳೆ 15 ಅಡಿ ಮೇಲಿದ್ದ ವಿಐಪಿ ಗ್ಯಾಲರಿ ಕುಸಿದುಬಿದ್ದಿತ್ತು.
ಗ್ಯಾಲರಿ ಕುಸಿದು ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಉಮಾ ಥಾಮಸ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಮೃಂದಾನಮ್ ನಂದನಮ್ 2024 ಕಾರ್ಯಕ್ರಮದಲ್ಲಿ 12 ಸಾವಿರಕ್ಕೂ ಅಧಿಕ ಜನರು ಸೇರಿದ್ದರು. ಗಣ್ಯರಿಗಾಗಿ ವಿಐಪಿ ಗ್ಯಾಲರಿ ತಾತ್ಕಾಲಿಕವಾಗಿ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ.
ಭದ್ರತಾ ವೈಫಲ್ಯ ಹಾಗೂ ಬೇಜಾಬ್ದಾರಿ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಕೊಚ್ಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗ್ಯಾಲರಿ ನಿರ್ಮಿಸಲು ಆಯೋಜಕರು ಪೂರ್ವಾನುಮತಿ ಪಡೆದಿರಲಿಲ್ಲ. ಅಲ್ಲದೇ ಸಾಕಷ್ಟು ಕಡೆ ಬ್ಯಾರಿಕೇಡ್ ಹಾಕದೇ ಬೇಕಾಬಿಟ್ಟಿ ಜನರು ನುಗ್ಗಲು ಅವಕಾಶ ಮಾಡಿಕೊಡಲಾಗಿತ್ತು. ಶಾಸಕಿ ವೇದಿಕೆ ಮೇಲೆ ಬರುತ್ತಿದ್ದಂತೆ ಸೂಕ್ತ ವ್ಯವಸ್ಥೆ ಮಾಡದೇ ಇರುವುದು ತಿಳಿದು ಬಂದಿದೆ. ಆದರೆ ವೇದಿಕೆ ಅಷ್ಟರಲ್ಲಿ ಕುಸಿದು ಕಾಂಕ್ರಿಟ್ ಮೇಲೆ ಬಿದ್ದಿದೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.