ಟಿಬೆಟ್-ನೇಪಾಳ ಗಡಿ ಭಾಗದಲ್ಲಿ ಒಂದೇ ದಿನ 6 ಬಾರಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 95ಕ್ಕೆ ಏರಿಕೆಯಾಗಿದ್ದು, 130ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರ ಬೆಳಿಗ್ಗೆ 6.45ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ದಾಖಲಾಗಿದ್ದು, 95 ಮಂದಿ ಅಸುನೀಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಡಿಂಗ್ರಿ ಕೌಂಟಿಯಲ್ಲಿ ಭೂಕಂಪನ ಕೇಂದ್ರಬಿಂದು ಪತ್ತೆಯಾಗಿದ್ದು, ಟಿಬೆಟ್, ನೇಪಾಳ, ಚೀನಾ ಹಾಗೂ ಭಾರತದ ಉತ್ತರ ರಾಜ್ಯಗಳಲ್ಲಿ ಭೂಕಂಪನ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ 4ರ ತೀವ್ರತೆಗಿಂತ 6 ಬಾರಿ ಭೂಕಂಪನ ಸಂಭವಿಸಿದ್ದು, 3ರ ತೀವ್ರತೆಗಿಂತ 200ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ. ಇದರಿಂದ ಟಿಬೆಟ್ ವಲಯದಲ್ಲಿ ಭಾರೀ ಹಾನಿ ಉಂಟಾಗಿದ್ದು, ಹಲವಾರು ಕಟ್ಟಡಗಳು ಧರೆಗುರುಳಿವೆ. ಇದರಿಂದ ಸಾವು-ನೋವು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಹಿಮಾಲಯ ಪರ್ವತದ ತಪ್ಪಲಲ್ಲಿ ಪದೇಪದೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಟಿಬೆಟ್ ಹಾಗೂ ನೇಪಾಳದ ಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 7.1ರ ತೀವ್ರತೆ ದಾಖಲಾಗಿದೆ. ಅಲ್ಲದೇ ನಂತರವೂ ಹಲವು ಬಾರಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ಬಾರಿ 7.02 ಗಂಟೆಗೆ 4.7ರ ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದರೆ, 7.07 ನಿಮಿಷಕ್ಕೆ 4.9 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಮೊದಲ ಬಾರಿ 10 ಕಿ.ಮೀ. ಆಳದಲ್ಲಿ ಭೂಕಂಪನದ ತೀವ್ರತೆ ಕಂಡು ಬಂದರೆ, ಮೂರನೇ ಬಾರಿ 30 ಕಿ.ಮೀ. ಆಳದಲ್ಲಿ ಪತ್ತೆಯಾಗಿದೆ.
ಭಾರತದಲ್ಲಿ ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವ ಜನರಿಗೆ ಆಗಿದೆ. ಬಿಹಾರದಲ್ಲಿ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಆದರೆ ಯಾವುದೇ ಆಸ್ತಿಪಾಸ್ತಿ, ಪ್ರಾಣಹಾನಿ ಸಂಭವಿಸಿದ ವರದಿಯಾಗಿಲ್ಲ.