ಬ್ರೇಕ್ ತುಂಡಾಗಿದ್ದರಿಂದ ಎಕ್ಸ್ ಪ್ರೆಸ್ ರೈಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಒಡಿಶಾದ ಬಾಲಸೂರ್ ಬಳಿ ಸಂಭವಿಸಿದ್ದು, ಭಾರೀ ದುರಂತವೊಂದು ತಪ್ಪಿದೆ.
ಕೋಲ್ಕತಾದಿಂದ ಶನಿವಾರ ಹೊರಟ್ಟಿದ್ದ ಜಲಪಾಯಿಗುರಿ-ಚೆನ್ನೈ ಎಕ್ಸ್ ಪ್ರೆಸ್ ರೈಲು ಒಡಿಶಾದ ಬಾಲಸೂರ್ ಬಳಿಯ ಸಬಿರಾ ರೈಲು ನಿಲ್ದಾಣದ ಬಳಿ ಬ್ರೇಕ್ ತುಂಡಾಗಿ ಹಳಿ ತಪ್ಪಿದೆ.
ಹಳಿ ತಪ್ಪಿದ ರೈಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಯಾವುದೇ ಪ್ರಾಣ ಹಾನಿ ಅಥವಾ ಗಾಯದ ಸಮಸ್ಯೆ ಉಂಟಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿ ತಪ್ಪಿ ನಿಂತಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದ್ದು, ರೈಲಿನ ಎರಡು ಬದಿಯಲ್ಲಿ ಪ್ರಯಾಣಿಕರು ನಿಂತಿರುವ ವೀಡಿಯೊಗಳು ಹರಿದಾಡುತ್ತಿವೆ.
ಬಾಲಸೂರ್ ನಲ್ಲಿ ಕಳೆದ ವರ್ಷ ಜೂನ್ 2ರಂದು ಸಂಭವಿಸಿದ ಭೀಕರ ರೈಲು ದುರಂತದಲ್ಲಿ 292 ಮಂದಿ ಅಸುನೀಗಿದ್ದು, 1200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.


