ನವದೆಹಲಿ: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಟ್ಯಾಂಕರ್ ಮಾಫಿಯಾ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ, ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಆಗಿರುವ ಬೆಂಗಳೂರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದರು.
ಬೆಂಗಳೂರಿನ ನೀರಿನ ಬವಣೆ ನೀಗಿಸಬೇಕಾದರೆ ಮೇಕೆದಾಟು ಯೋಜನೆಗೆ ಅನುಮತಿ ಸಿಗಬೇಕಿದೆ. ಎಲ್ಲಾ ರಾಜಕೀಯ ಬದಿಗಿಟ್ಟು ಈ ಯೋಜನೆಗೆ ಬೆಂಬಲ ಕೊಡಬೇಕಿದೆ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಮೇಕೆದಾಟು ಯೋಜನೆಗಾಗಿ ಕೆಲಸ ಮಾಡಿವೆ. ಆದರೆ ಇಲ್ಲಿಯವರೆಗೂ ಯಶಸ್ಸು ಸಿಕ್ಕಿಲ್ಲ. ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಒಪ್ಪಿಗೆ ನೀಡಬೇಕು ಎಂದು ಅವರು ಕೋರಿದರು.
ಟ್ಯಾಂಕರ್ ಮಾಫಿಯಾ ಬಗ್ಗೆ ಕಳವಳ:
ಬೆಂಗಳೂರು ನಗರ ಅಗಾಧವಾಗಿ ಬೆಳೆಯುತ್ತಿದೆ. ಉದ್ಯೋಗ ಅರಸಿ ದೇಶದ ಎಲ್ಲಾ ಮೂಲೆಗಳಿಂದ ಜನರು ಅಲ್ಲಿಗೆ ಹೋಗುತ್ತಿದ್ದಾರೆ. ಎಲ್ಲರಿಗೂ ಆಶ್ರಯ ನೀಡುವ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ಗಂಭೀರವಾಗಿದೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.
1.45 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿಗೆ 16 ಟಿಎಂಸಿ ಅಡಿಯಷ್ಟು ಕಾವೇರಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ, ನಗರದ ಬೇಡಿಕೆಗೆ ಹೋಲಿಸಿದರೆ ಈ ನೀರು ಬಹಳ ಕಡಿಮೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಟ್ಯಾಂಕರ್ ಮಾಫಿಯಾ ಜನರನ್ನು ಸುಲಿಗೆ ಮಾಡುತ್ತಿದೆ. ಒಂದು ಟ್ಯಾಂಕರ್ ನೀರಿಗೆ 3000 ರೂ. ತೆರಬೇಕಿದೆ. ಇದು ಎಷ್ಟು ಅನ್ಯಾಯ ಎಂದರೆ ಕೇವಲ ನಾಲ್ಕು ಜನರಿರುವ ಒಂದು ಕುಟುಂಬ ಪ್ರತೀ ತಿಂಗಳು ನೀರಿಗಾಗಿ 20,000 ರೂ. ಖರ್ಚು ಮಾಡಬೇಕಿದೆ. ಇದು ಕಳವಳಕಾರಿ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಎಲ್ಲರೂ ರಾಜಕೀಯ ಬದಿಗಿಟ್ಟು ಮೇಕೆದಾಟು ಯೋಜನೆ ಬಗ್ಗೆ ಬೆಂಬಲ ನೀಡಬೇಕಿದೆ. ಈ ಯೋಜನೆ ಕಾರ್ಯಗಾಯವಾದರೆ ಈ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ಅವರು ಹೇಳಿದರು.