ಕೇರಳದ ತಿರುವನಂಪುರದಲ್ಲಿ 23 ವರ್ಷದ ಶರೋನ್ ರಾಜ್ ಕೊಲೆ ಪ್ರಕರಣದಲ್ಲಿ ನೆಯ್ಯಟ್ಟಿಂಕರ ಸೆಷನ್ಸ್ ನ್ಯಾಯಾಲಯ ಆತನ ಪ್ರೇಯಸಿ ಗ್ರೀಷ್ಮಾಗೆ ಗಲ್ಲು ಶಿಕ್ಷೆ ವಿಧಿಸಿದೆ. ಈ ಮೂಲಕ ಗಲ್ಲು ಶಿಕ್ಷೆಗೆ ಗುರಿಯಾದ ಅತ್ಯಂತ ಕಿರಿಯ ಸ್ತ್ರೀ ಎಂಬ ಕುಖ್ಯಾತಿಗೆ ಪಾತ್ರಳಾಗಿದ್ದಾಳೆ.
ತನ್ನ ವಯಸ್ಸಿನ ಕಾರಣ ಮತ್ತು ತನ್ನ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆಯಿಲ್ಲ ಎಂಬ ಆಕೆಯ ಹೇಳಿಕೆಯನ್ನು ನ್ಯಾಯಾಲಯವು ಸೋಮವಾರ ತಿರಸ್ಕರಿಸಿ ಕೊಲೆಯ ಪ್ರಕರಣದಲ್ಲಿ ಅಪರಾಧಿಯ ವಯಸ್ಸು ಮತ್ತು ಇತರ ಸಂದರ್ಭಗಳನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ಸೆಷನ್ಸ್ ನ್ಯಾಯಾಲಯವು ಈ ಪ್ರಕರಣದ ಮೂರನೇ ಆರೋಪಿಯಾಗಿರುವ ಆಕೆಯ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್ ಗೆ 3 ವರ್ಷ ಜೈಲು ಶಿಕ್ಷೆಯನ್ನು ಕೂಡ ವಿಧಿಸಿದೆ. 24 ವರ್ಷದ ಅಪರಾಧಿ ಗ್ರೀಷ್ಮಾ ಮರಣದಂಡನೆ ಶಿಕ್ಷೆ ಅನುಭವಿಸಿದ ದೇಶದ ಅತ್ಯಂತ ಕಿರಿಯ ಯುವತಿಯಾಗಿದ್ದಾಳೆ.
ತನ್ನ ಶೈಕ್ಷಣಿಕ ಸಾಧನೆಗಳು, ಹಿಂದೆ ಯಾವುದೇ ಅಪರಾಧ ಮಾಡಿಲ್ಲ ಮತ್ತು ತಾನು ತನ್ನ ಹೆತ್ತವರ ಏಕೈಕ ಮಗಳು ಎಂಬ ಅಂಶವನ್ನು ಉಲ್ಲೇಖಿಸಿ ಆಕೆ ಶಿಕ್ಷೆಯಲ್ಲಿ ಸಡಿಲಿಕೆಯನ್ನು ಕೋರಿದ್ದಳು. ಆದರೆ, 586 ಪುಟಗಳ ತೀರ್ಪಿನಲ್ಲಿ ಅಪರಾಧಿಯ ವಯಸ್ಸು ಮತ್ತು ಇತರ ಸಂದರ್ಭಗಳನ್ನು ಪರಿಗಣಿಸಿ ಈ ಬಗ್ಗೆ ಗಮನಹರಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಗ್ರೀಷ್ಮಾ ಹಂತ ಹಂತವಾಗಿ ಅಪರಾಧವನ್ನು ನಿರ್ವಹಿಸಲು ಸಂಚು ರೂಪಿಸಿದ್ದಳು. ಆಕೆಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಆಕೆ ಈ ಮೊದಲು ಕೂಡ ಯುವಕನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಳು.
ತನಿಖೆಯನ್ನು ಬೇರೆಡೆಗೆ ತಿರುಗಿಸಲು ಬಂಧನದ ನಂತರವೂ ಆತ್ಮಹತ್ಯೆಯ ನಾಟಕವಾಡಿದ್ದಳು ಎಂದು ನ್ಯಾಯಾಲಯವು ಹೇಳಿದೆ. ಪ್ರಾಸಿಕ್ಯೂಟರ್ ಪ್ರಕಾರ, ಆ ಯುವತಿಯ ಕೃತ್ಯಗಳು ಸಮಾಜಕ್ಕೆ ಹಾನಿಕಾರಕ ಸಂದೇಶವನ್ನು ರವಾನಿಸಿದ್ದವು ಮತ್ತು ಪ್ರೀತಿಯ ಪಾವಿತ್ರ್ಯವನ್ನು ಹಾಳು ಮಾಡಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ತನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬ ಗ್ರೀಷ್ಮಾ ಅವರ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು. ಆಕೆ ಹಣ್ಣಿನ ಜ್ಯೂಸ್ನಲ್ಲಿ ಮಾತ್ರೆಗಳನ್ನು ಬೆರೆಸಿ ಶರೋನ್‌ಗೆ ವಿಷ ನೀಡಲು ಪ್ರಯತ್ನಿಸಿದ್ದಳು.
ಶರೋನ್ ರಾಜ್ ಕೊಲೆ:
ಕಳೆದ 2022ರ ಅಕ್ಟೋಬರ್ 25ರಂದು 23 ವರ್ಷದ ಶರೋನ್ ರಾಜ್ ವಿಷಪೂರಿತ ಜ್ಯೂಸ್ ಸೇವಿಸಿದ ನಂತರ ಅನಾರೋಗ್ಯಕ್ಕೀಡಾಗಿದ್ದರು. ಇದಾದ 11 ದಿನಗಳ ನಂತರ, ಅವರು ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದರು. ನಾಗರಕೋಯಿಲ್‌ನ ಸೇನಾ ಸಿಬ್ಬಂದಿಯೊಂದಿಗೆ 22 ವರ್ಷದ ಗ್ರೀಷ್ಮಾಳ ವಿವಾಹವನ್ನು ನಿಶ್ಚಯಿಸಲಾಗಿತ್ತು.
ಇದರಿಂದ ಆಕೆ ತನ್ನ ಪ್ರೇಮಿಯಾಗಿದ್ದ 23 ವರ್ಷದ ಶರೋನ್ ಜೊತೆ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಆತನನ್ನು ತನ್ನ ಜೀವನದಿಂದ ದೂರವಿಡಲು ಪ್ರಯತ್ನಿಸಿದ್ದಳು. ಇದಕ್ಕೆ ಶರೋನ್ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಗ್ರೀಷ್ಮಾ ಆತನ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ.
ಶರೋನ್ ಜೊತೆ ಲೈಂಗಿಕ ಸಂಬಂಧ ಹೊಂದಲು ಬಯಸುವುದಾಗಿ ಹೇಳಿ ಆತನನ್ನು ಮನೆಗೆ ಕರೆಸಿಕೊಂಡಿದ್ದ ಗ್ರೀಷ್ಮಾ ಆತನಿಗೆ ವಿಷ ಬೆರೆಸಿದ ಜ್ಯೂಸ್ ನೀಡಿದ್ದಳು. ಅದನ್ನು ಕುಡಿದ ನಂತರ ಆತನ ಆರೋಗ್ಯ ಹದಗೆಟ್ಟಿತ್ತು. ಆಯುರ್ವೇದಿಕ್ ಕೀಟನಾಶಕ ಬೆರೆಸಿದ ಜ್ಯೂಸ್ ನೀಡಿದ್ದ ಆಕೆ ತನ್ನ ಕೃತ್ಯ ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಿದ್ದಳು. 1 ಹನಿ ನೀರು ಕೂಡ ಕುಡಿಯಲಾಗದೆ ಶರೋನ್ 11 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡಿದ್ದರು. ಆದರೆ, ಬಹುಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿದ್ದರು.
1ವರ್ಷದ ನಿಕಟ ಸಂಬಂಧ:
ಗ್ರೀಷ್ಮಾ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಸಾಹಿತ್ಯ ಅಧ್ಯಯನ ಮಾಡಿದ್ದಾಳೆ. ಕೇರಳದ ತಿರುವನಂತಪುರಂ ಜಿಲ್ಲೆಯ ಪರಸ್ಸಲ ಮೂಲದ ಶರೋನ್ ರಾಜ್ ಅದೇ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ರೇಡಿಯಾಲಜಿ ವಿದ್ಯಾರ್ಥಿನಿಯಾಗಿದ್ದ. ಇಬ್ಬರೂ ಒಂದು ವರ್ಷಕ್ಕೂ ಹೆಚ್ಚು ಕಾಲ ನಿಕಟ ಸಂಬಂಧ ಹೊಂದಿದ್ದರು. ಗ್ರೀಷ್ಮಾ ಅವರ ಕುಟುಂಬವು ಕೇರಳದ ಇನ್ನೊಬ್ಬ ವ್ಯಕ್ತಿಯೊಂದಿಗೆ ಆಕೆಯ ವಿವಾಹವನ್ನು ನಿಗದಿಪಡಿಸಿದ್ದರಿಂದ ಶರೋನ್ ಜೊತೆಗಿನ ಸಂಬಂಧ ಹದಗೆಟ್ಟಿತ್ತು. ನಂತರ, ಗ್ರೀಷ್ಮಾ ತನ್ನ ಚಿಕ್ಕಪ್ಪ, ಮೂರನೇ ಆರೋಪಿ ನಿರ್ಮಲಕುಮಾರನ್ ನಾಯರ್ ಮತ್ತು ತನ್ನ ತಾಯಿಯೊಂದಿಗೆ ಶರೋನ್ ಅವರನ್ನು ಕೊಲ್ಲಲು ಪ್ಲಾನ್ ರೂಪಿಸಲು ಸಂಚು ರೂಪಿಸಿದ್ದಳು.
ಸೋಮವಾರದ ತೀರ್ಪಿಗೆ ಪ್ರತಿಕ್ರಿಯಿಸಿದ ಶರೋನ್ನ ತಾಯಿ ಪ್ರಿಯಾ, ಇಂತಹ ಅನುಕರಣೀಯ ಆದೇಶವನ್ನು ನೀಡಿದ್ದಕ್ಕಾಗಿ ನ್ಯಾಯಾಲಯಕ್ಕೆ ಕೃತಜ್ಞರಾಗಿರುವುದಾಗಿ ವರದಿಗಾರರಿಗೆ ತಿಳಿಸಿದರು.