ಕೋಲ್ಕತಾ ಮತ್ತು ಶ್ರೀನಗರ ನಡುವೆ ಸಂಚರಿಸಬೇಕಿದ್ದ ಇಂಡಿಗೋ ವಿಮಾನ ಇಂಧನ ಸೋರಿಕೆಯಿಂದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
166 ಪ್ರಯಾಣಿಕರಿದ್ದ ಇಂಡಿಗೋ 6E-6961 ವಿಮಾನ ಬುಧವಾರ ಸಂಜೆ 4.30ರ ಸುಮಾರಿಗೆ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.
ವಿಮಾನ ಹಾರಾಟದ ವೇಳೆ ಇಂಧನ ಸೋರಿಕೆ ಗಮನಿಸಿದ ಪೈಲೆಟ್ ಕೂಡಲೇ ವಿಮಾನ ನಿಯಂತ್ರಣ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಹಿನ್ನೆಲೆಯಲ್ಲಿ ದುರಂತ ತಪ್ಪಿದ್ದು, ಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಗಾಯಾಳುಗಳ ವರದಿಯಾಗಿಲ್ಲ.
ಹವಾಮಾನ ವೈಪರಿತ್ಯದ ನಡುವೆ ವಿಮಾನವನ್ನು ರನ್ ವೇಯಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ವಿಮಾನ ನಿಲ್ದಾಣದ ತಾಂತ್ರಿಕ ತಜ್ಞರು ವಿಮಾನದ ಇಂಧನ ಸೋರಿಕೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಆತಂಕದ ಸಮಯದಲ್ಲೂ ಪೈಲೆಟ್ ಯಾವುದೇ ಗೊಂದಲವಿಲ್ಲದೇ ತಾಳ್ಮೆಯಿಂದ ವಿಮಾನ ಇಳಿಸಿದ ಬಗ್ಗೆ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪೈಲೆಟ್ ಮತ್ತು ಕ್ಯಾಪ್ಟನ್ ಜವಾಬ್ದಾರಿಗಳನ್ನು ಹಂಚಿಕೊಂಡು ಉತ್ತಮವಾಗಿ ಒತ್ತಡದ ಸಂದರ್ಭವನ್ನು ನಿಭಾಯಿಸಿದ್ದಾರೆ ಎಂದು ಪ್ರಯಾಣಿಕರು ಹೇಳಿದ್ದಾರೆ.


