ಚೆನ್ನೈ: ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿರುವ ಮಕ್ಕಳ್ ನೀಧಿ ಮಯ್ಯಂ ಅಧ್ಯಕ್ಷ ಹಾಗೂ ನಟ ಕಮಲ್ ಹಾಸನ್, ಇದು ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ವೈವಿಧ್ಯತೆ ದುರ್ಬಲಗೊಳಿಸಲಿದೆ ಎಂದು ಎಚ್ಚರಿಸಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಕಮಲ್ ಹಾಸನ್, ಈ ಕ್ರಮವು ಏಕರೂಪದ “ಹಿಂದಿಯಾ” ಮಾದರಿಯ ದೇಶದ ರಚನೆಗೆ ಕಾರಣವಾಗುವ ಮೂಲಕ ಭಾರತದ ಅಂತರ್ಗತ ದೃಷ್ಟಿಕೋನಕ್ಕೆ ಅಪಾಯ ಎದುರಾಗಲಿದೆ ಎಂದು ಹೇಳಿದರು.
“ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಕ್ಷೇತ್ರ ಮರುವಿಂಗಡಣೆಯ ವಿಷಯವು ಕೇವಲ ತಮಿಳುನಾಡಿಗೆ ಮಾತ್ರ ಆತಂಕದ ವಿಷಯವಾಗಿಲ್ಲ. ಇದು ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಈಶಾನ್ಯ ರಾಜ್ಯಗಳ ಮೇಲೂ ಪರಿಣಾಮ ಬೀರಲಿದೆ” ಎಂದು ಕಮಲ್ ಹಾಸನ್ ಹೇಳಿದರು.
ಒಗ್ಗಟ್ಟು ಪ್ರದರ್ಶನ: ಕ್ಷೇತ್ರ ಪುನರ್ ವಿಂಗಡಣೆಯಿಂದ ವ್ಯಾಪಕ ಪರಿಣಾಮಗಳು ಉಂಟಾಗಲಿವೆ ಎಂದು ಹೇಳಿದ ಅವರು, ಸರ್ವಪಕ್ಷ ಸಭೆ ಆಯೋಜಿಸಿದ್ದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಮಿಳುನಾಡಿನ ಎಲ್ಲಾ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದನ್ನು ಕಮಲ್ ಹಾಸನ್ ಶ್ಲಾಘಿಸಿದರು.
ಜಾಗೃತಿ ಮೂಡಿಸುವ ಈ ಸರ್ವಪಕ್ಷ ಸಭೆಯನ್ನು ಆಯೋಜಿಸಿದ್ದಕ್ಕಾಗಿ ನಾನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಪ್ರಾಮಾಣಿಕವಾಗಿ ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ವ್ಯಕ್ತಿಯು ವ್ಯಕ್ತಿಯು ಬೆಂಕಿ ಹೊತ್ತಿಕೊಂಡ ಒಣ ಹುಲ್ಲಿನಂತೆ ನಾಶವಾಗುತ್ತಾನೆ ಎಂಬ ತಿರುವಳ್ಳುವರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಕಮಲ್ ಹಾಸನ್, ದೇಶಕ್ಕೆ ಹಾನಿ ಎದುರಾಗುವ ಮೊದಲೇ ಈ ಸಮಸ್ಯೆಯನ್ನು ಪರಿಹರಿಸಲು ಸಭೆ ನಡೆಸಲಾಗಿದೆ ಎಂದು ಹೇಳಿದರು.
ತಮ್ಮ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿದ ಕಮಲ್ ಹಾಸನ್, ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಿದ ರಾಜ್ಯಗಳನ್ನು ಶಿಕ್ಷಿಸಬಾರದು ಎಂದು ಅವರು ಕೇಂದ್ರ ಸರ್ಕಾರವನ್ನ ಒತ್ತಾಯಿಸಿದರು
ಪ್ರಜಾಪ್ರಭುತ್ವ ಮತ್ತು ಫೆಡರಲಿಸಂ ದೇಶದ ಎರಡು ಕಣ್ಣುಗಳಿದ್ದಂತೆ ಮತ್ತು ಎರಡನ್ನೂ ಮೌಲ್ಯೀಕರಿಸುವ ಮೂಲಕ ಮಾತ್ರ ನಾವು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಧಿಸಬಹುದು” ಎಂದು ಕಮಲ್ ವಿವರಿಸಿದರು.


