ಚೆನ್ನೈ: ಸಕಲ ಕಲಾವಲ್ಲಭ ಕಮಲ್ ಹಾಸನ್ ಶೀಘ್ರವೇ ರಾಜ್ಯಸಭೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ತಮಿಳುನಾಡಿನ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಕೇಳಿಬರುತ್ತಿದೆ.
ಕಮಲ್ ಅವರನ್ನು ಡಿಎಂಕೆ ಪಕ್ಷವು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸಚಿವ ಪಿ.ಕೆ. ಶೇಖರ್ ಬಾಬು ಅವರು ಬುಧವಾರ ಕಮಲ್ ಹಾಸನ್ರನ್ನು ಅವರ ನಿವಾಸದಲ್ಲಿ ಭೇಟಿಯಾದ ನಂತರ ಈ ಚರ್ಚೆಗೆ ಮತ್ತೆ ಬಲ ಬಂದಂತಾಗಿದೆ.
ಮಕ್ಕಳ್ ನೀಧಿ ಮೈಯಂ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ಕಮಲ್, 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಇಂಡಿಯಾ ಮೈತ್ರಿಕೂಟದ ಜೊತೆ ಮೈತ್ರಿ ಮಾಡಿಕೊಂಡು ಡಿಎಂಕೆ ಪರವಾಗಿ ಪ್ರಚಾರ ಮಾಡಿದ್ದರು.
ಈ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ೩೯ ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಮೈತ್ರಿಕೂಟವು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಡಿಎಂಕೆ ಪರವಾಗಿ ಕಮಲ್ ಹಾಸನ್ ಪ್ರಚಾರ ಮಾಡಿದ್ದಕ್ಕೆ ಪ್ರತಿಯಾಗಿ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭರವಸೆ ನೀಡಿದ್ದಾರೆ ಎಂದು ಡಿಎಂಕೆ ಮೂಲಗಳು ಹೇಳಿವೆ.
ಜೂನ್ 2025 ರಲ್ಲಿ 6 ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿದ್ದು, ಶೇಖರ್ ಬಾಬು ಅವರು ಕಮಲ್ ಹಾಸನ್ ಅವರನ್ನು ಭೇಟಿಯಾಗಿ, ರಾಜ್ಯಸಭೆಗೆ ಶಿಫಾರಸು ಮಾಡುವ ಸಿಎಂ ಸ್ಟಾಲಿನ್ ಅವರ ಭರವಸೆ ನೀಡಿದರು ಎನ್ನಲಾಗಿದೆ.
ಕಮಲ್ ಒಪ್ಪಿಕೊಳ್ತಾರಾ?
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಕ್ಕಳ್ ನೀಧಿ ಮೈಯಂ ಪಕ್ಷದ ವಕ್ತಾರ ಮತ್ತು ಖ್ಯಾತ ತಮಿಳು ಚಲನಚಿತ್ರ ನಿರ್ಮಾಪಕ ಮುರಳಿ ಅಪ್ಪಾಸ್, ಪಕ್ಷಕ್ಕೆ ರಾಜ್ಯಸಭಾ ಸದಸ್ಯತ್ವ ನೀಡುವ ಭರವಸೆ ಸಿಕ್ಕಿದೆ ಎಂಬುದನ್ನು ದೃಢಪಡಿಸಿದರು. ಆದರೆ ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಳ್ಳಬೇಕೆ ಎಂಬುದನ್ನು ಸ್ವತಃ ಕಮಲಹಾಸನ್ ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕಮಲ್ ಹಾಸನ್ ಫೆಬ್ರವರಿ 21, 2018 ರಂದು ಮಧುರೈನಲ್ಲಿ ಮಕ್ಕಳ್ ನೀಧಿ ಮೈಯಂ ಪಕ್ಷವನ್ನು ಸ್ಥಾಪಿಸಿದ್ದರು. ತಮ್ಮ ಪಕ್ಷವು ಪಾರದರ್ಶಕತೆ, ಆಡಳಿತದಲ್ಲಿ ಸುಧಾರಣೆ ಮತ್ತು ಪ್ರಾದೇಶಿಕ ಸಹಕಾರವನ್ನು ಪ್ರತಿಪಾದಿಸುವ ವೇದಿಕೆಯಾಗಿದೆ ಎಂದು ಅವರು ಹೇಳಿದ್ದರು. ಅವರ ಪಕ್ಷದ ಧ್ವಜವು ಭಾರತದ ದಕ್ಷಿಣ ರಾಜ್ಯಗಳ (ಐದು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ) ನಡುವಿನ ಏಕತೆಯನ್ನು ಸಂಕೇತಿಸುತ್ತದೆ.



