ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ವಿತರಿಸಲಾದ ಒಟ್ಟು 5,54,32,314 ಎನ್ಯುಮರೇಷನ್ ಅರ್ಜಿಗಳ ಪೈಕಿ 4,26,75,861 ಫಾರಂಗಳು ಡಿಜಿಟಲೀಕರಣಗೊಂಡಿದ್ದು, ಶೇ. 76.99 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
ಎಸ್ ಐಆರ್ ಪರಿಶೀಲನೆ ವೇಳೆ ರಾಜ್ಯಾದ್ಯಂತ ಗೈರಾದ, ಸ್ಥಳಾಂತರಗೊಂಡ, ಮೃತಪಟ್ಟ, ನಕಲಿ ಮತ್ತು ಇತರೆ ವರ್ಗಕ್ಕೆ (ಎಎಸ್ ಡಿಡಿಓ) ಸೇರಿದ ಒಟ್ಟು 84,31,612 ಮತದಾರರು ಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದರು
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವಿ.ಅನ್ಬುಕುಮಾರ್, ‘84,31,612 ಮತದಾರರಲ್ಲಿ 11,61,231 ಮತದಾರರು ನಾಪತ್ತೆಯಾಗಿದ್ದರೆ, 51,74,968 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಿದರು.
ಹಾಗೆಯೇ 14,99,799 ಮತದಾರರು ಮೃತಪಟ್ಟಿದ್ದು, 5,62,572 ಜನರು ಎರಡು ಕಡೆ ಮತದಾನದ ಹಕ್ಕು ಹೊಂದಿರುವುದು ಕಂಡುಬಂದಿದೆ. ಇದರ ಜೊತೆಗೆ 33,042 ಇತರೆ ಮತದಾರರನ್ನೂ ಗುರುತಿಸಲಾಗಿದೆ ಎಂದು ತಿಳಿಸಿದರು.
ಎಸ್‌ಡಿಡಿಒ ಪ್ರಕ್ರಿಯೆ ಹೇಗೆ?
ಎಸ್‌ಡಿಡಿಒನಲ್ಲಿ ಮತದಾರರು ಸಂಖ್ಯೆ ಹೆಚ್ಚಿರುವ ವಿಚಾರವಾಗಿ ಮಾತನಾಡಿದ ಅವರು, ‘ಪ್ರತಿಯೊಂದಕ್ಕೆ ಸ್ಥಳ ಮಹಾಜರ್ ಮಾಡಿರುತ್ತಾರೆ. ಮರಣ ಪ್ರಮಾಣಪತ್ರ ತೆಗೆದುಕೊಂಡು ಅಪ್ಲೋಡ್ ಮಾಡಿತ್ತಾರೆ. ಗೈರುಹಾಜರು, ಸ್ಥಳಾಂತರಗೊಂಡ ಅಂದರೆ ಮತದಾರರ ವಿಳಾಸದಲ್ಲಿ ಅವರಿಲ್ಲ ಎನ್ನುವ ಅರ್ಥ. ಅವರು ಶಿಫ್ಟ್ ಆಗಿರಬಹುದು ಅಥವಾ ಗೈರುಹಾಜರು ಅಂತ ಪರಿಗಣನೆ ಆಗುತ್ತೆ. ದೇಶದ ಎಲ್ಲಿಯೂ ವೋಟರ್ಗಾಗಿ ಅರ್ಜಿ ಸಲ್ಲಿಸಿಲ್ಲ ಎಂದ್ದಾದರೆ, ಅಂತವರು ಆನ್ಲೈನ್ ಮೂಲಕ ಅಥವಾ ಫಾರ್ಮ್ 6 ಅಲ್ಲಿ ಸಲ್ಲಿಸಬಹುದು’ ಎಂದು ಅವರು ಮಾಹಿತಿ ನೀಡಿದರು.
ಎನ್ಯುಮರೇಷನ್ ಫಾರಂ ಬಿಎಲ್‌ಒಗಳಿಗೆ ಹಸ್ತಾಂತರಿಸುವಂತೆ ಅನ್ಬುಕುಮಾರ್ ಮನವಿ
ರಾಜ್ಯಾದ್ಯಂತ ಇನ್ನೂ 43,24,847 ಫಾರಂಗಳನ್ನು ಸಾರ್ವಜನಿಕರು ವಾಪಸ್ ಮಾಡುವುದು ಬಾಕಿ ಇದ್ದು, ಎನ್ಯುಮರೇಷನ್ ಫಾರಂಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ ಆದಷ್ಟು ಬೇಗ ಬಿಎಲ್‌ಒಗಳಿಗೆ ಹಸ್ತಾಂತರಿಸುವಂತೆ ಅನ್ಬುಕುಮಾರ್ ಮನವಿ ಮಾಡಿದರು.
ಡ್ರಾಫ್ಟ್ ರೋಲ್‌ನಲ್ಲಿ ಸೇರ್ಪಡೆ:
ಫಾರಂಗಳನ್ನು ವಾಪಸ್ ನೀಡಿದರೆ ಮಾತ್ರ ಡ್ರಾಫ್ಟ್ ರೋಲ್‌ನಲ್ಲಿ ಹೆಸರು ಸೇರ್ಪಡೆಯಾಗಲಿದೆ. ಮನೆಗೆ ಮತದಾರರು ಲಭ್ಯವಿಲ್ಲದಿದ್ದರೂ ಅವರ ಕುಟುಂಬದ ಸದಸ್ಯರು ಸಹಿ ಮಾಡಿ ನೀಡಬಹುದು ಹಾಗೂ 2002ರ ಮಾಹಿತಿ ಇಲ್ಲ ಎಂಬ ಕಾರಣಕ್ಕೆ ಫಾರಂಗಳನ್ನು ಇಟ್ಟುಕೊಳ್ಳಬಾರದು. ಆಯಾ ಎನ್ಯುಮರೇಷನ್ ಫಾರಂ ಸಲ್ಲಿಸಲು ಆಗಸ್ಟ್ 8 ಕೊನೆಯ ದಿನವಾಗಿದೆ. ಅಲ್ಲದೆ, 2026ರ ಅಕ್ಟೋಬರ್ 1 ಕ್ಕೆ 18 ವರ್ಷ ತುಂಬುವ ಹೊಸ ಅರ್ಹ ಮತದಾರರು ಫಾರ್ಮ್-6 ಮೂಲಕ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.
ಇನ್ನು ಬೃಹತ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 1,03,88,363 ಮತದಾರರಿದ್ದು, ಈ ಪೈಕಿ 39,38,202 ಎಸ್‌ಡಿಡಿಒ ಮತದಾರರು ಪತ್ತೆಯಾಗಿದ್ದಾರೆ. ಇನ್ನು 16,57,582 ಫಾರಂಗಳು ಡಿಜಿಟಲೀಕರಣಗೊಳ್ಳಲು ಬಾಕಿ ಇವೆ. ಎಸ್‌ಡಿಡಿಒ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ವಿ.ಅನ್ಬುಕುಮಾರ್ ಹೇಳಿದ್ದಾರೆ.



