Wednesday, September 23, 2026
Google search engine
Homeರಾಜ್ಯಯಶವಂತರಾಯಗೌಡ ಪಾಟೀಲ್ ರಾಜೀನಾಮೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ

ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ

ಬೆಂಗಳೂರು: ತಮ್ಮ ಕ್ಷೇತ್ರವನ್ನು ಬರಗಾಲ ಪಟ್ಟಿಯಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ನೀಡಿರುವ ವಿಚಾರ ವಿಧಾನಸಭೆಯಲ್ಲಿ ಬುಧವಾರ ಭಾರೀ ಚರ್ಚೆಗೆ ಕಾರಣವಾಯಿತು.

ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿ ನಾಯಕರು, ಈ ಬಗ್ಗೆ ಸ್ಪೀಕರ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ವಿಚಾರವನ್ನು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಪ್ರಸ್ತಾಪಿಸಿ ರಾಜೀನಾಮೆ ಪತ್ರದ ಕುರಿತು ಸ್ಪೀಕರ್ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಆರೋಗ್ಯ ಸಚಿವ ಯು.ಟಿ. ಖಾದರ್ ಮಧ್ಯಪ್ರವೇಶಿಸಿದಾಗ ಆರಗ ಜ್ಞಾನೇಂದ್ರ ಆಕ್ಷೇಪ ವ್ಯಕ್ತಪಡಿಸಿದರು. “ಪತ್ರ ಬರೆದಿರುವುದು ಹಾಲಿ ಸ್ಪೀಕರ್‌ಗೆ, ಮಾಜಿ ಸ್ಪೀಕರ್‌ಗೆ ಅಲ್ಲ. ನೀವು ಯಾಕೆ ಎದ್ದು ನಿಲ್ಲುತ್ತೀರಾ?” ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಖಾದರ್, “ಅವರು ನಿಮಗೆ ಪತ್ರ ಬರೆದಿದ್ದಾರಾ?” ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್, “ನಾನು ಈ ಸದನದ ವಿಪಕ್ಷ ನಾಯಕ. ಶಾಸಕರ ಬಗ್ಗೆ ಮಾತನಾಡುತ್ತಿದ್ದೇನೆ” ಎಂದು ತಿರುಗೇಟು ನೀಡಿದರು.

ಅಂಗೀಕಾರಕ್ಕೆ ಸವಾಲ್:

ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ಪತ್ರ ತಮ್ಮ ಕೈಯಲ್ಲಿದೆ ಎಂದು ಆರ್. ಅಶೋಕ್ ಹೇಳಿದರು. “ಯಾರಾದರೂ ರಾಜೀನಾಮೆ ಕೊಟ್ಟರೆ ಅಂಗೀಕಾರ ಮಾಡುತ್ತೇನೆ ಎಂದು ಮಂತ್ರಿ ಮಂಡಲ ರಚನೆ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಈಗ ರಾಜೀನಾಮೆ ಅಂಗೀಕಾರ ಮಾಡಿದ್ದಾರಾ? ಹಾಗಾದರೆ ಡಿ.ಕೆ. ಶಿವಕುಮಾರ್ ಮಾತಿಗೆ ಮೂರು ಕಾಸಿನ ಬೆಲೆ ಇಲ್ಲವೇ?” ಎಂದು ಪ್ರಶ್ನಿಸಿದರು.

ಧಮ್ ಇದ್ದರೆ, ತಾಕತ್ ಇದ್ದರೆ ರಾಜೀನಾಮೆ ಅಂಗೀಕಾರ ಮಾಡಿ” ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ವಿಪಕ್ಷದ ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ವಿಪಕ್ಷದವರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಹೇಳಿದರು.

“ಇದು ಜನರ ಬದುಕಿಗಾಗಿ ಕೊಟ್ಟಿರುವ ರಾಜೀನಾಮೆ. ಬರಗಾಲದ ಬಗ್ಗೆ ಪ್ರಧಾನಮಂತ್ರಿಯವರೇ ನಮಗೆ ಎಚ್ಚರಿಕೆ ನೀಡಿದ್ದಾರೆ. ಯಶವಂತರಾಯಗೌಡ ಪಾಟೀಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ. ಅವರು ಭಾವನಾತ್ಮಕವಾಗಿ ಹೇಳಿದ್ದಾರೆ. ಅವರ ಕ್ಷೇತ್ರದಲ್ಲಿ ಜನ ಸಾಲಸೋಲ ಮಾಡಿ ಬೆಳೆ ಬೆಳೆದಿದ್ದಾರೆ” ಎಂದು ತಿಳಿಸಿದರು.

ಬರಪೀಡಿತ ಪ್ರದೇಶ ಘೋಷಣೆಗೆ ಮಾರ್ಗಸೂಚಿಗಳಿದ್ದು, ಏಕಾಏಕಿ ಘೋಷಣೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. “ಹೆಚ್.ಕೆ. ಪಾಟೀಲ್ ಅವರಂತಹ ಹಿರಿಯ ನಾಯಕರಿಗೇ ಒತ್ತಡ ಇದೆ. ಯಶವಂತರಾಯಗೌಡ ಪಾಟೀಲ್ ಅವರಿಗೂ ಒತ್ತಡ ಇರುವುದು ತಪ್ಪಲ್ಲ. ನನ್ನ ಕ್ಷೇತ್ರದಲ್ಲೂ ಬರ ಇದೆ, ನಾನೇನೂ ಕೇಳಲು ಹೋಗಿಲ್ಲ. ಪಾಟೀಲ್ ನನ್ನ ಬಳಿ ಬಂದಿದ್ದರು. ಅವರನ್ನು ಸಮಾಧಾನ ಮಾಡಿ ಕಳುಹಿಸಿದ್ದೇನೆ” ಎಂದರು.

ಇದು ಕೆ.ಎಸ್. ಈಶ್ವರಪ್ಪ, ನಾಗೇಂದ್ರ ಅವರ ರೀತಿಯ ರಾಜೀನಾಮೆ ಅಲ್ಲ. ಜನರ ಬದುಕಿಗಾಗಿ ಕೊಟ್ಟಿರುವ ರಾಜೀನಾಮೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ನಿಯಮಾನುಸಾರ ಇಲ್ಲ:

ಈ ಎಲ್ಲಾ ವಾದ-ಪ್ರತಿವಾದಗಳ ನಡುವೆ ಸ್ಪೀಕರ್ ಜಿ.ಎಸ್. ಪಾಟೀಲ್ ಅವರು ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ಕುರಿತು ಸ್ಪಷ್ಟನೆ ನೀಡಿದರು. ಶಾಸಕರು ನೀಡಿರುವ ರಾಜೀನಾಮೆ ನಿಯಮಾನುಸಾರ ಇಲ್ಲದ ಕಾರಣ ನಾನು ಅದನ್ನು ಅಂಗೀಕಾರ ಮಾಡಿಲ್ಲ” ಎಂದು ಸ್ಪೀಕರ್ ಸದನಕ್ಕೆ ತಿಳಿಸಿದರು.

ಇದರೊಂದಿಗೆ ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸ್ಪೀಕರ್ ಸ್ಪಷ್ಟನೆ ನೀಡಿದರು.

ರಾಜೀನಾಮೆ ಪತ್ರದಲ್ಲಿ ಏನಿದೆ?

ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ನೀಡಿರುವ ರಾಜೀನಾಮೆ ಪತ್ರದಲ್ಲಿ ವಿಜಯಪುರ ಜಿಲ್ಲೆಯ ನಾನು ಪ್ರತಿನಿಧಿಸುವ ಇಂಡಿ ತಾಲೂಕು 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ಆರಂಭದಲ್ಲಿ ಸ್ವಲ್ಪ ಮಳೆ ಬಿದ್ದ ಪ್ರಯುಕ್ತ ರೈತರು ಸಾಲ ಮಾಡಿ ಬೀಜ, ಗೊಬ್ಬರಗಳನ್ನು ಖರೀದಿಸಿ, ಬಿತ್ತನೆ ಮಾಡಿರುತ್ತಾರೆ.

ಆದರೆ, ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆಗಳು ಬತ್ತಿಹೋಗಿದ್ದು, ಜನ – ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯುಂಟಾಗಿರುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ 28.08.2026ರಂದು ಮನವಿ ಪತ್ರವನ್ನು ಸಲ್ಲಿಸಿ, ಇಂಡಿ ತಾಲ್ಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಮನವಿ ಪತ್ರ ಸಲ್ಲಿಸಲಾಗಿತ್ತು.

ಆದರೆ, ವಿಜಯಪುರ ಜಿಲ್ಲೆಯ ಒಟ್ಟು 13 ತಾಲೂಕುಗಳ ಪೈಕಿ ನನ್ನ ಇಂಡಿ ಮತ್ತು ಚಡಚಣ ಈ 2 ತಾಲೂಕುಗಳನ್ನು ಹೊರತುಪಡಿಸಿ, ಇದುವರೆಗೂ ರಾಜ್ಯದ 177 ತಾಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ ಎಂದು ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments