ಪಂಚತಾರಾ ಹೋಟೆಲ್ ನ ಈಜುಕೊಳದಲ್ಲಿ ಈಜಾಡಲು ತೆರಳಿದ್ದ ಇಬ್ಬರು ವಿದೇಶಿಯರು ಕರೆಂಟ್ ಶಾಕ್ ಹೊಡೆದು ಮೃತಪಟ್ಟ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಜರ್ಮನ್ ದೇಶದ ವಿಮಾನ ಸಂಸ್ಥೆಯ ಸಿಬ್ಬಂದಿಯಾದ 57 ವರ್ಷದ ಅಲೆಗ್ಸಾಂಡರ್ ಮ್ಯಾಕ್ಸಿಮಿಲನ್ ಥೆಸ್ಸಿ ಮತ್ತು ಸ್ಲೋವಾಕಿಯಾ ದೇಶದ 45 ವರ್ಷದ ಜೂರತ್ ಹೋವರ್ಟ್ ಪ್ರಜೆಗಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರನ್ನು ರಕ್ಷಿಸಲಾಗಿದ್ದು, ಅಮೆರಿಕ ಮೂಲದ ಇಬ್ಬರು ಗಾಯಗೊಂಡಿದ್ದಾರೆ. ಜೂರತ್ ಐಬಿಎಂ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಎಂದು ಹೇಳಲಾಗಿದೆ.
41 ವರ್ಷದ ಅಮೆರಿಕನ್ ಪ್ರಜೆ ಮ್ಯಾಥ್ಯೂ ಡೆಸಾಂಟಿಸ್ ಗಾಯಗೊಂಡಿದ್ದು, 28 ವರ್ಷದ ರಾಹುಲ್ ತಿವಾರಿ ರಕ್ಷಿಸಲು ಹೋಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಸ್ಥಳೀಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಂಚತಾರಾ ಹೋಟೆಲ್ ನ ಮೂರನೇ ಮಹಡಿಯಲ್ಲಿರುವ ಈಜುಕೊಳದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ದುರ್ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಅಲ್ಲದೇ ಹೋಟೆಲ್ ವೆಬ್ ಸೈಟ್ ನಲ್ಲಿ ಅಕ್ಟೋಬರ್ 30 ಮತ್ತು 21ರಂದು ಈಜುಕೊಳಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಪ್ರಕಟಣೆ ನೀಡಿದೆ.
ಹಿಲ್ಟನ್ ಗ್ರೂಪ್ ಗೆ ಸೇರಿದ ೨೪ ಅಂತಸ್ತಿನ ಪಂಚತಾರಾ ಹೋಟೆಲ್ ಇದಾಗಿದ್ದು, ಈ ಹೋಟೆಲ್ ನಲ್ಲಿ ಒಂದು ದಿನ ತಂಗಲು 25 ಸಾವಿರ ರೂ. ನಿಗದಿಪಡಿಸಲಾಗಿದೆ.
