ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆಸಲಾಗಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸ್ಟಿಂಗ್ ವಿಡಿಯೋದಲ್ಲಿ ಮಾಡಲಾಗಿರುವ ಆರೋಪಗಳು ಕಟ್ಟುಕಥೆಯಾಗಿದ್ದು, ಉದ್ದೇಶಪೂರ್ವಕವಾಗಿ ಸೃಷ್ಟಿಸಿರುವ ಸಾಧ್ಯತೆ ಇದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಿಸಿಬಿ ಪೊಲೀಸರು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ವಿಡಿಯೋದಲ್ಲಿ ಬಿಂಬಿಸಿರುವ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಈವರೆಗೆ ಸಂಗ್ರಹಿಸಿರುವ ಹೇಳಿಕೆಗಳು ಹಾಗೂ ಸಾಕ್ಷ್ಯಾಧಾರಗಳು ಅಂತಹ ಘಟನೆ ನಡೆದಿರುವುದನ್ನು ದೃಢಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅಪಪ್ರಚಾರ ಮಾಡಲಾಗಿದೆ ಎಂಬ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲರನ್ನೂ ವಿಚಾರಣೆ ನಡೆಸಲಾಗಿದೆ. ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೊಳಪಡಿಸಲಾಗಿದೆ. ಅವರ ಹೇಳಿಕೆಗಳು ಹಾಗೂ ಈವರೆಗೆ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ವಿಡಿಯೋದಲ್ಲಿ ಉಲ್ಲೇಖಿಸಿರುವ ಆರೋಪಗಳು ಸುಳ್ಳು ಮತ್ತು ಕಟ್ಟುಕಥೆಯಿಂದ ಕೂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಎಫ್‌ಎಸ್‌ಎಲ್‌ಗೆ:
ಸ್ಟಿಂಗ್ ವಿಡಿಯೋ ಚಿತ್ರೀಕರಣಕ್ಕೆ ಬಳಸಲಾಗಿದೆ ಎನ್ನಲಾದ ಮೂಲ ಮೊಬೈಲ್ ಫೋನ್‌ನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ವಿಡಿಯೋದ ನೈಜತೆ, ಸಮಗ್ರತೆ ಹಾಗೂ ಚಿತ್ರೀಕರಣದ ವಿವರಗಳನ್ನು ಪರಿಶೀಲಿಸಲು ಮೊಬೈಲ್ ಫೋನ್‌ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ.
2011ರಲ್ಲಿ ನಡೆದಿದೆ ಎನ್ನಲಾದ ಘಟನೆಯನ್ನು ಆಧರಿಸಿ 2023ರಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಎದುರಾಗಿದೆ. ವಿಡಿಯೋವನ್ನು ಯಾವ ಸಂದರ್ಭ ಮತ್ತು ಉದ್ದೇಶಕ್ಕಾಗಿ ಚಿತ್ರೀಕರಿಸಲಾಯಿತು, ಅದರಲ್ಲಿ ಭಾಗಿಯಾಗಿರುವವರು ಯಾರು ಹಾಗೂ ಅವರ ಪಾತ್ರವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಡಿಯೋವನ್ನು ಪೂರ್ವಯೋಜಿತವಾಗಿ ಚಿತ್ರೀಕರಿಸಲಾಗಿದೆಯೇ, ಕೃತಕವಾಗಿ ಸೃಷ್ಟಿಸಲಾಗಿದೆಯೇ ಅಥವಾ ತಿರುಚಲಾಗಿದೆಯೇ ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಪ್ರಮುಖ ಉದ್ದೇಶವಾಗಿದೆ.
ವಿಡಿಯೋ ಅಪ್‌ಲೋಡ್:
2023ರಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ವಿಡಿಯೋ 2026ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಯೂಟ್ಯೂಬ್, ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ವಿಡಿಯೋವನ್ನು ಮೊದಲು ಯಾರು ಅಪ್‌ಲೋಡ್ ಮಾಡಿದರು, ಬಳಿಕ ಯಾರಿಂದ ಯಾರಿಗೆ ವರ್ಗಾವಣೆಯಾಯಿತು ಮತ್ತು ಅದು ಸಾಮಾಜಿಕ ಜಾಲತಾಣಗಳಿಗೆ ಹೇಗೆ ತಲುಪಿತು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ವಿಡಿಯೋ ಪ್ರಸಾರಕ್ಕೆ ಅನಾಮಧೇಯ ಖಾತೆಗಳು, ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್), ಮರೆಮಾಚಿದ ಐಪಿ ವಿಳಾಸಗಳು ಹಾಗೂ ನಕಲಿ ಗುರುತು ಪ್ರದರ್ಶಿಸುವ ಮೊಬೈಲ್ ಸಂಖ್ಯೆಗಳಂತಹ ಡಿಜಿಟಲ್ ತಂತ್ರಗಳನ್ನು ಬಳಸಿರುವುದು ತಾಂತ್ರಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ಸಿಸಿಬಿ ತಿಳಿಸಿದೆ.
ವಿಡಿಯೋ ಅಪ್‌ಲೋಡ್ ಮಾಡಲು ಬಳಸಿದ ಮೊಬೈಲ್ ಫೋನ್‌ನ್ನು ದೆಹಲಿ ಸಮೀಪದ ಮೊಬೈಲ್ ಮಾರಾಟ ಮಳಿಗೆಯೊಂದರಲ್ಲಿ ಖರೀದಿಸಿರುವುದನ್ನು ವಿದ್ಯುನ್ಮಾನ ಸಾಕ್ಷ್ಯಾಧಾರಗಳ ವಿಶ್ಲೇಷಣೆಯಿಂದ ಪತ್ತೆಹಚ್ಚಲಾಗಿದೆ. ಮೊಬೈಲ್ ಖರೀದಿಸಿದ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರಲ್ಲಿ ಒಬ್ಬನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಕ್ರಿಯೇಟರ್ ಬಂಧನ:
ಬಂಧಿತ ವ್ಯಕ್ತಿ ದೆಹಲಿ ನಿವಾಸಿಯಾಗಿದ್ದು, ಫ್ರೀಲ್ಯಾನ್ಸ್ ಸಾಮಾಜಿಕ ಮಾಧ್ಯಮ ಕ್ರಿಯೇಟರ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನಿಗೆ ಪ್ರಭಾವಿ ರಾಜಕಾರಣಿಗಳ ಸಂಪರ್ಕ ಹೊಂದಿರುವ ಕೆಲವರೊಂದಿಗೆ ಸಂಬಂಧವಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಸಂಪರ್ಕಗಳ ಸ್ವರೂಪ, ವ್ಯಾಪ್ತಿ ಹಾಗೂ ಪ್ರಕರಣದೊಂದಿಗಿನ ಸಂಬಂಧವನ್ನು ಪರಿಶೀಲಿಸಲಾಗುತ್ತಿದೆ ಎಂದು ಸಿಸಿಬಿ ತಿಳಿಸಿದೆ.
ರಾಜಕೀಯ ವಿವಾದ:
ರಾಜ್ಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳ ತೇಜೋವಧೆ ಮಾಡಿ, ಅವರ ಘನತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರುವುದರ ಜತೆಗೆ ರಾಜಕೀಯ ವಿವಾದ ಹಾಗೂ ಸಾರ್ವಜನಿಕರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವ ಉದ್ದೇಶದಿಂದ ವಿಡಿಯೋವನ್ನು ಯೋಜಿತವಾಗಿ ಪ್ರಸಾರ ಮಾಡಿರುವ ಸಾಧ್ಯತೆಯ ಬಗ್ಗೆ ಸುಳಿವು ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಡಿಯೋವನ್ನು ವ್ಯಾಪಕವಾಗಿ ಹರಡಿಸಲು ಹಲವರು ಸಂಘಟಿತರಾಗಿ ಕಾರ್ಯನಿರ್ವಹಿಸಿರುವ ಸಾಧ್ಯತೆಯನ್ನೂ ತನಿಖಾ ತಂಡ ಪರಿಶೀಲಿಸುತ್ತಿದೆ. ಈ ಸಂಬಂಧ ಈಗಾಗಲೇ ಕೆಲವರನ್ನು ವಿಚಾರಣೆ ನಡೆಸಲಾಗಿದ್ದು, ಇತರ ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಪ್ರಕರಣದ ಹಿಂದಿರುವ ಉದ್ದೇಶ, ವಿಡಿಯೋ ಪ್ರಸಾರದ ಹಿಂದಿನ ವ್ಯಕ್ತಿಗಳು ಹಾಗೂ ಅದರ ಸಂಪೂರ್ಣ ಹಸ್ತಾಂತರ ಸರಪಳಿಯನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
