ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಗುರುವಾರ ಮಧ್ಯಾಹ್ನ 12:28ಕ್ಕೆ ಶಾಸ್ತ್ರೋಕ್ತವಾಗಿ ತೆರೆಯಲಾಯಿತು.
ಹಾಸನಾಂಬೆಗೆ ಜೈ… ತಾಯಿಗೆ ಉಘೇ ಉಘೇ… ಎಂಬ ಭಕ್ತರ ಭಕ್ತಿಪೂರ್ವಕ ಜಯಘೋಷಗಳ ನಡುವೆ ದೇವಿಯ ದರ್ಶನೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.
ಅರಸು ವಂಶಸ್ಥರಿಂದ ಸಾಂಪ್ರದಾಯಿಕ ಪೂಜೆ ನೆರವೇರಿತು. ಪೂರ್ವ ಸಂಪ್ರದಾಯದಂತೆ ತಳವಾರ ವಂಶಸ್ಥರಾದ ನಂಜರಾಜು ಅವರು ವಿಶೇಷ ಪೂಜೆ ಸಲ್ಲಿಸಿ, ವಂಶಪಾರಂಪರ್ಯವಾಗಿ ಬಂದಿರುವ ಪವಿತ್ರ ಖಡ್ಗದಿಂದ ಗೊನೆಕಟ್ಟಿದ್ದ ಬಾಳೆ ಕಂಬವನ್ನು ಕಡಿಯುವ ಮೂಲಕ ದರ್ಶನಕ್ಕೆ ಅನುವು ಮಾಡಿಕೊಟ್ಟರು.
ಬಾಳೆ ಕಂಬ ಕಡಿಯುತ್ತಿದ್ದಂತೆಯೇ ಗರ್ಭಗುಡಿಯ ಬಾಗಿಲನ್ನು ತೆರೆಯಲಾಯಿತು. ಬಾಗಿಲು ತೆರೆದಾಗ ದೀಪ ಬೆಳಗುತ್ತಿತ್ತು.
ಬಾಗಿಲು ತೆರೆದ ಮೊದಲ ದಿನದಂದು ಯಾವುದೇ ಆಭರಣ ಹಾಗೂ ವಸ್ತ್ರಾಲಂಕಾರಗಳಿಲ್ಲದ ದೇವಿಯ ‘ವಿಶ್ವರೂಪ ದರ್ಶನ’ ಪಡೆದ ಮಠಾಧೀಶರು, ಗಣ್ಯರು ಹಾಗೂ ಜನಪ್ರತಿನಿಧಿಗಳು ಪುನೀತಭಾವ ಅನುಭವಿಸಿದರು.
ಗಣ್ಯರ ಉಪಸ್ಥಿತಿ:
ಈ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷಣಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜಿ.ಪಂ ಸಿಇಒ ಶುಭಂ ಶುಕ್ಲಾ, ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಸೇರಿದಂತೆ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
