ನವದೆಹಲಿ: ಬಂಧಿತ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಸಂವಿಧಾನಬದ್ಧ 24 ಗಂಟೆಗಳ ಗಡುವನ್ನು ಔಪಚಾರಿಕವಾಗಿ ಬಂಧನ ದಾಖಲಿಸಿದ ಸಮಯದಿಂದಲ್ಲ, ಪೊಲೀಸರು ವ್ಯಕ್ತಿಯನ್ನು ವಾಸ್ತವವಾಗಿ ವಶಕ್ಕೆ ಪಡೆದ ಕ್ಷಣದಿಂದಲೇ ಲೆಕ್ಕಹಾಕಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದುರ್ಕರ್ ಅವರನ್ನೊಳಗೊಂಡ ನ್ಯಾಯಪೀಠ, ಸಂವಿಧಾನದ 22(2)ನೇ ವಿಧಿಯಡಿ ಬಂಧನ ಮತ್ತು ವಶಕ್ಕೆ ಪಡೆಯುವಿಕೆ ನಡುವೆ ಕೃತಕ ವ್ಯತ್ಯಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಔಪಚಾರಿಕ ಬಂಧನಕ್ಕೂ ಮುನ್ನ ವ್ಯಕ್ತಿಯನ್ನು ಪೊಲೀಸರು ವಶದಲ್ಲಿಟ್ಟುಕೊಂಡಿದ್ದ ಅವಧಿಯನ್ನೂ 24 ಗಂಟೆಗಳ ಲೆಕ್ಕಾಚಾರಕ್ಕೆ ಸೇರಿಸಬೇಕು. ಈ ಅವಧಿಯನ್ನು ಹೊರಗಿಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಂವಿಧಾನದ 22(2)ನೇ ವಿಧಿಯ ಪ್ರಕಾರ, ಬಂಧಿತ ವ್ಯಕ್ತಿಯನ್ನು ಬಂಧನದ ಸ್ಥಳದಿಂದ ಹತ್ತಿರದ ಮ್ಯಾಜಿಸ್ಟ್ರೇಟ್ ಮುಂದೆ 24 ಗಂಟೆಗಳೊಳಗೆ ಹಾಜರುಪಡಿಸಬೇಕು. ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆದೊಯ್ಯಲು ಅಗತ್ಯವಿರುವ ಪ್ರಯಾಣದ ಸಮಯವನ್ನು ಮಾತ್ರ ಈ ಲೆಕ್ಕಾಚಾರದಿಂದ ಹೊರಗಿಡಬಹುದು.
ಬಂಧನಕ್ಕೂ ಮುನ್ನ ವಿಚಾರಣೆ, ತನಿಖೆ, ಶೋಧ ಅಥವಾ ಜಪ್ತಿ ಉದ್ದೇಶಕ್ಕಾಗಿ ವ್ಯಕ್ತಿಯನ್ನು ವಶದಲ್ಲಿಟ್ಟುಕೊಂಡಿದ್ದ ಸಮಯವನ್ನೂ 24 ಗಂಟೆಗಳ ಗಡುವಿನಲ್ಲಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಈ ಹಿಂದೆ ಒಡಿಶಾ ಹೈಕೋರ್ಟ್‌ನ ಆರ್ಯಮಾನ್ ಪಟ್ನಾಯಕ್ ಪ್ರಕರಣ, ಮದ್ರಾಸ್ ಹೈಕೋರ್ಟ್‌ನ ಕಣ್ಣನ್ ಪ್ರಕರಣ ಹಾಗೂ ಕೇರಳ ಹೈಕೋರ್ಟ್‌ನ ಅರುಣ್ ಕೆ. ಥಾಮಸ್ ಪ್ರಕರಣಗಳಲ್ಲಿ ಔಪಚಾರಿಕ ಬಂಧನಕ್ಕೂ ಮುನ್ನದ ವಶಾವಧಿಯನ್ನು 24 ಗಂಟೆಗಳ ಲೆಕ್ಕಾಚಾರದಿಂದ ಹೊರಗಿಡಲು ಅವಕಾಶ ನೀಡಲಾಗಿತ್ತು. ಆದರೆ, ಈ ಹಿಂದಿನ ನ್ಯಾಯಾಲಯಗಳ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟ್ ಇದೀಗ ತಳ್ಳಿಹಾಕಿದೆ.
ಅನುಮತಿಸಲಾದ 24 ಗಂಟೆಗಳ ಅವಧಿಯನ್ನು ಮೀರಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದೆ ವ್ಯಕ್ತಿಯನ್ನು ವಶದಲ್ಲಿಟ್ಟುಕೊಂಡಿರುವುದು ಕಂಡುಬಂದರೆ ಅಂತಹ ವ್ಯಕ್ತಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅಲ್ಲದೆ, 24 ಗಂಟೆಗಳ ಸಾಂವಿಧಾನಿಕ ಮಿತಿಯೊಳಗಿದ್ದರೂ ಬಂಧನದ ಅವಧಿ ಪ್ರಕರಣದ ಸನ್ನಿವೇಶಗಳಿಗೆ ಅನುಗುಣವಾಗಿ ಸಮಂಜಸವಾಗಿರಬೇಕು. ಬಂಧನದ ನೈಜ ದಿನಾಂಕ ಮತ್ತು ಸಮಯವನ್ನು ದಾಖಲಿಸುವುದು ಹಾಗೂ ಸಾಂವಿಧಾನಿಕ ಗಡುವು ಪಾಲನೆಯಾಗಿದೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸುವುದು ಮ್ಯಾಜಿಸ್ಟ್ರೇಟ್‌ಗಳ ಕರ್ತವ್ಯವಾಗಿದೆ.
ಬಂಧನದ ಅವಧಿ ಅತಿಯಾಗಿರುವುದು ಕಂಡುಬಂದರೆ ನ್ಯಾಯಾಂಗ ಬಂಧನಕ್ಕೆ (ರಿಮ್ಯಾಂಡ್) ಒಪ್ಪಿಸಲು ನಿರಾಕರಿಸುವ ಅಧಿಕಾರವೂ ಮ್ಯಾಜಿಸ್ಟ್ರೇಟ್‌ಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬಂಧಿತರ ಹಕ್ಕುಗಳಿಗೆ ಬಲ:
ಪೊಲೀಸರು ಔಪಚಾರಿಕವಾಗಿ ಬಂಧನ ದಾಖಲಿಸುವುದಕ್ಕೂ ಮುನ್ನ ವ್ಯಕ್ತಿಗಳನ್ನು ವಶದಲ್ಲಿಟ್ಟುಕೊಳ್ಳುವ ಕ್ರಮಗಳಿಗೆ ಈ ತೀರ್ಪು ಮಹತ್ವದ ನಿಯಂತ್ರಣ ವಿಧಿಸಿದೆ. ಬಂಧಿತರ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ ಹಾಗೂ ಪೊಲೀಸರ ಕ್ರಮಗಳ ಮೇಲಿನ ನ್ಯಾಯಾಂಗ ಮೇಲ್ವಿಚಾರಣೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಮಹತ್ವ ಪಡೆದಿದೆ.
