ಬೆಳಗಾವಿ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಪಡಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ನಡೆದ 5ನೇ ಸುತ್ತಿನ ಸಭೆಯಲ್ಲೂ ಅಂತಿಮ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ ₹3,600 ದರ ನೀಡಲು ಒಪ್ಪಿಕೊಂಡಿವೆ. ಸಾಗಣೆ ವೆಚ್ಚ ಸೇರಿ ರೈತರಿಗೆ ಹೆಚ್ಚಿನ ಹಣ ಸಿಗಲಿದ್ದು, ಗುರುವಾರದಿಂದಲೇ ಕಟಾವು ಹಂಗಾಮು ಆರಂಭಿಸುವಂತೆ ಸಚಿವರು ತಿಳಿಸಿದರು.
ಇದಕ್ಕೆ ಕಿತ್ತೂರು, ಖಾನಾಪುರ ಹಾಗೂ ಬೈಲಹೊಂಗಲ ಭಾಗದ ರೈತರು ಸಮ್ಮತಿ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರದ ₹1,000 ಪ್ರೋತ್ಸಾಹ ಧನ ಹಾಗೂ ಸಕ್ಕರೆ ಎಂಎಸ್ಪಿ ದರ ಹೆಚ್ಚಳಕ್ಕೆ ಹೋರಾಟ ಮುಂದುವರಿಯಲಿದೆ ಎಂದು ಹಸಿರು ಸೇನೆ ಹಾಗೂ ರೈತರ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ.
ಪ್ರತಿಭಟನೆ, ನೂಕಾಟ-ತಳ್ಳಾಟ, ರೈತರ ವಶಕ್ಕೆ!
ಇನ್ನೊಂದೆಡೆ, ನೇಗಿಲಯೋಗಿ ರೈತ ಸೇವಾ ಸಂಘದ ಅಧ್ಯಕ್ಷ ರವಿ ಪಾಟೀಲ ಹಾಗೂ ಬಣದವರು ಈ ದರವನ್ನು ತೀವ್ರವಾಗಿ ವಿರೋಧಿಸಿ ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಜೈಲ್ ಭರೋ ಚಳವಳಿಗೆ ಕರೆ ನೀಡಿ ಹೊರಟ
ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ನೇತೃತ್ವದ ಪಾದಯಾತ್ರೆಯನ್ನು ಮುಕ್ತಿ ಮಠದ ಬಳಿ ಪೊಲೀಸರು ತಡೆದು, 200ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಹಾಗೂ ರಾಣಿ ಚೆನ್ನಮ್ಮ ವೃತ್ತದ ಬಳಿ ವಕೀಲರು ಮತ್ತು ರೈತರು ನಡೆಸಿದ ಪ್ರತಿಭಟನೆ ವೇಳೆ ಪೊಲೀಸರ ನಡುವೆ ತೀವ್ರ ನೂಕಾಟ-ತಳ್ಳಾಟ ನಡೆಯಿತು. ಸರ್ಕಾರದ ನಡವಳಿಕೆಯನ್ನು ಖಂಡಿಸಿ ಚೂನಪ್ಪ ಪೂಜೇರಿ ಅವರು ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿದ್ದಾರೆ.
