ಬೆಂಗಳೂರು: ಕರ್ನಾಟಕ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಹತ್ವದ ಪ್ರೋತ್ಸಾಹಧನ ಹೆಚ್ಚಳದ ಆದೇಶ ಹೊರಬಿದ್ದಿದೆ.
2018ರ ಡಿಸೆಂಬರ್ 27ರಂದು ಹೊರಡಿಸಲಾದ ಸರ್ಕಾರದ ಆದೇಶದಂತೆ, ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಒಂದು ಬಾರಿ ಪ್ರೋತ್ಸಾಹಧನವನ್ನು ರೂ.1 ಲಕ್ಷದಿಂದ ರೂ.2 ಲಕ್ಷಗಳಿಗೆ ಹೆಚ್ಚಿಸಲಾಗಿದೆ.
ಇದರ ಜೊತೆಗೆ, ಪಿ.ಯು.ಸಿ.ಯಲ್ಲಿ ಶೇಕಡಾ 95ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು NEET ಮೂಲಕ ಸರ್ಕಾರಿ ಕೋಟಾದಡಿ ಪ್ರವೇಶ ದೊರಕದೆ, ಆಡಳಿತ ಮಂಡಳಿಯ ಕೋಟಾದಡಿ MBBSಗೆ ಪ್ರವೇಶ ಪಡೆದಿರುವ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಿಶೇಷ ನೆರವು ಘೋಷಿಸಲಾಗಿದೆ.
ಮೊದಲನೇ ವರ್ಷದ ಕಾಲೇಜು ಶುಲ್ಕವಾಗಿ ರೂ.25 ಲಕ್ಷಗಳನ್ನು ಪಾವತಿಸಲು ಸರ್ಕಾರ ಆದೇಶಿಸಿದೆ. ಅಲ್ಲದೆ, MBBS ಮೊದಲನೇ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 60 ಅಂಕಗಳನ್ನು ಪಡೆದು ತೇರ್ಗಡೆಯಾದಲ್ಲಿ, ಮತ್ತೊಂದು ರೂ.25 ಲಕ್ಷಗಳ ಪ್ರೋತ್ಸಾಹಧನವನ್ನು ಮಂಜೂರು ಮಾಡುವುದಾಗಿ ತಿಳಿಸಿದೆ.
ಈ ಮಹತ್ವದ ನಿರ್ಧಾರಕ್ಕೆ ಮಾನ್ಯ ಸಮಾಜ ಕಲ್ಯಾಣ ಸಚಿವರಿಂದ ಅನುಮೋದನೆ ದೊರೆತಿದ್ದು, ರಾಜ್ಯಪಾಲರ ಆದೇಶಾನುಸಾರ ಪ್ರಕಟಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎಲ್. ನರಸಿಂಹಮೂರ್ತಿ ಸಹಿ ಮಾಡಿದ ಈ ಆದೇಶವನ್ನು ಮಹಾಲೇಖಪಾಲರು, ಆಯುಕ್ತರು ಹಾಗೂ ಕಲ್ಯಾಣ ಕೇಂದ್ರಗಳಿಗೆ ಕಳುಹಿಸಲಾಗಿದೆ.
ಈ ಕ್ರಮದಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಆರ್ಥಿಕ ನೆರವು ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.



