ಹೊಸದಿಲ್ಲಿ: ವಿವಾದಿತ ವಕ್ಫ್ ಮಸೂದೆಯನ್ನು ತಕ್ಷಣಕ್ಕೆ ಮಂಡಿಸದಿರಲು ಸರಕಾರ ನಿರ್ಧರಿಸಿದೆ ಎಂಬ ವರ್ತಮಾನ ಬಂದಿದೆ. ಮಸೂದೆಯನ್ನು ನ.29 ಮಂಡನೆ ಮಾಡಲು ಉದ್ದೇಶಿಸಲಾಗಿತ್ತು.
ಈ ಕುರಿತಾದ ಜಂಟಿ ಸಂಸದೀಯ ಸಮಿತಿಯು ಮಸೂದೆ ಮಂಡನೆಗೆ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಜೆಪಿಸಿಯ ಅಧ್ಯಕ್ಷ ಜಗದಾಂಬಿಕ ಪಾಲ್ ಅವರು ತರಾತುರಿಯಲ್ಲಿ ಬಿಲ್ ಮಂಡನೆಗೆ ನಿರ್ಧರಿಸಿದ್ದಾರೆ ಎಂದು ವಿಪಕ್ಷಗಳ ನಾಯಕರು, ಸಭೆಯಿಂದ ಹೊರ ನಡೆದಿದ್ದರು.
ಬುಧವಾರ (ನ.27), ಜಾರ್ಖಂಡ್ ರಾಜ್ಯದ ಗೊಡ್ಡಾ ಕ್ಷೇತ್ರದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಬಿಲ್ ಮಂಡನೆಗೆ ಹೆಚ್ಚುವರಿ ಕಾಲಾವಕಾಶವನ್ನು ಕೇಳಿದ್ದಾರೆ
ವಕ್ಫ್ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ಈಗ ನಡೆಯುತ್ತಿರುವ ಪ್ರಕ್ರಿಯೆಗಳು ಸಂವಿಧಾನವನ್ನೇ ಅಣಕಿಸುವಂತಿದೆ ಎಂದು ವಿಪಕ್ಷಗಳು, ಸಭೆಯಿಂದ ಘೋಷಣೆಯನ್ನು ಕೂಗುತ್ತಾ ಹೊರ ನಡೆದಿದ್ದವು.
ಆದರೆ, ಮಸೂದೆ ಮಂಡನೆಗೆ ಜಗದಾಂಬಿಕ ಪಾಲ್ ಹೆಚ್ಚುವರಿ ಕಾಲಾವಕಾಶವನ್ನು ಕೇಳುವ ನಿರ್ಧಾರಕ್ಕೆ ಬರುವ ಸಾಧ್ಯತೆಯನ್ನು ಅರಿತ ವಿಪಕ್ಷಗಳ ನಾಯಕರು ಮತ್ತೆ ಸಭೆಗೆ ಹಾಜರಾಗಿದ್ದಾರೆ.
ಜೆಪಿಸಿ ಸಭೆಯು ಇದುವರೆಗೆ 25 ಬಾರಿ ಮಾತ್ರ ಸಭೆಯನ್ನು ಸೇರಿವೆ, ಇದೊಂದು ತರಾತುರಿಯಲ್ಲಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಎಲ್ಲರಿಗೂ ಅವರವರ ವಿಚಾರಗಳನ್ನು ಮಂಡಿಸಲು ಸಮಯ ಬೇಕಾಗುತ್ತದೆ ಎಂದು ವಿಪಕ್ಷಗಳು, ಜೆಪಿಸಿ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.
ವಕ್ಫ್ ತಿದ್ದುಪಡಿ ಮಸೂದೆಯ ಕರಡು ಪ್ರತಿಯನ್ನು ಸಭೆಯಲ್ಲಿ ಇಡಲಾಗಿತ್ತು, ಆದರೆ ಜೆಪಿಸಿಯ ಸದಸ್ಯರು ಇದಕ್ಕೆ ಪೂರ್ವತಯಾರಿಯನ್ನು ಮಾಡಿಕೊಂಡಿರಲಿಲ್ಲ. ಹಾಗಾಗಿ, ಸದಸ್ಯರು ನೇರವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಬಳಿ, ಮುಂದೂಡಲು ಮನವಿಯನ್ನು ಮಾಡಿದರು.
ಮುಸ್ಲಿಮರ ಹಕ್ಕಿಗೆ ಧಕ್ಕೆ
ಕೋಲ್ಕತ್ತ: ವಕ್ಫ್ ಮಸೂದೆ ಜಾತ್ಯತೀತ ವಿರೋಧಿಯಾಗಿದ್ದು, ಮುಸ್ಲಿಮರ ಹಕ್ಕುಗಳನ್ನು ಕಸಿಯುತ್ತದೆ ಎಂದು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ.
ಈ ಸಂಬಂಧ ಕೇಂದ್ರ ಸರ್ಕಾರವು ರಾಜ್ಯಗಳ ಅಭಿಪ್ರಾಯ ಪಡೆದುಕೊಂಡಿಲ್ಲ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.
`ಈ ಮಸೂದೆಯು ಒಲ್ಲೂಟ ವ್ಯವಸ್ಥೆಯ ವಿರೋಧಿ ಮತ್ತು ಜಾತ್ಯತೀತತೆಯ ವಿರೋಧಿಯಾಗಿದೆ. ಒಂದು ನಿರ್ದಿಷ್ಟ ಸಮುದಾಯಕ್ಕೆ ಕೇಡುಂಟುಮಾಡುವ ಉದ್ದೇಶಿತ ಕೃತ್ಯ ಇದಾಗಿದೆ. ಈ ಮಸೂದೆಯು ಮುಸ್ಲಿಮರ ಹಕ್ಕುಗಳನ್ನು ಕಸಿಯುತ್ತದೆ. ವಕ್ಫ್ ಮಸೂದೆ ಬಗ್ಗೆ ಕೇಂದ್ರವು ರಾಜ್ಯಸರ್ಕಾರಗಳ ಅಭಿಪ್ರಾಯ ಪಡೆದಿಲ್ಲ’ಎಂದು ಹೇಳಿದ್ದಾರೆ.
ಯಾವುದೇ ಧರ್ಮದ ಮೇಲೆ ದಾಳಿ ನಡೆದರೂ ನಾನು ಅದನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯಲ್ಲಿ ತಿದ್ದುಪಡಿ ಮಸೂದೆಯ ಮೂಲಕ ಪ್ರಸ್ತಾಪಿಸಿರುವ ತಿದ್ದುಪಡಿಗಳನ್ನು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ. ಇದು ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿವೆ.
ವಿರೋಧ ಪಕ್ಷಗಳು ಸಂಸತ್ತಿನ ಕಲಾಪಗಳು ನಡೆಯದಂತೆ ತಡೆಯುತ್ತಿರುವುದು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರು ಕೆಡಿಸಲು ಪ್ರಯತ್ನಿಸುತ್ತಿರುವುದು ‘ದುರದೃಷ್ಟಕರ’ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ.