ಕಾಂಗ್ರೆಸ್‌ನ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಪ್ರಿಯಾಂಕಾ ಗಾಂಧಿ (Priyanka Gandhi) ಗುರುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ವಯನಾಡಿನ ಸಂಸದರಾಗಿ ಆಯ್ಕೆಯಾಗಿರುವ ಪ್ರಮಾಣಪತ್ರವನ್ನು ಇಂದು ರಾಹುಲ್ ಗಾಂಧಿ ಸಮ್ಮುಖದಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಹಸ್ತಾಂತರಿಸಲಾಗಿದೆ.
ನಾಳೆ ಲೋಕಸಭೆಯಲ್ಲಿ ಅವರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದೇವೇಳೆ, ಪ್ರಿಯಾಂಕಾ ಗಾಂಧಿಗೆ ಸಿಹಿ ತಿನಿಸುವ ಮೂಲಕ ರಾಹುಲ್ ಗಾಂಧಿ ಶುಭಾಶಯ ತಿಳಿಸಿದ್ದಾರೆ.
ಈ ನಡುವೆ, ತಮ್ಮ ಮೇಲೆ ವಯನಾಡು ಜನರು ತೋರಿದ ಅಭೂತಪೂರ್ವ ವಿಶ್ವಾಸ ಮತ್ತು ಬೆಂಬಲಕ್ಕೆ ಪ್ರಿಯಾಂಕಾ ಗಾಂಧಿ ಧನ್ಯವಾದ ತಿಳಿಸಿದ್ದಾರೆ. ಅವರ ಜೊತೆಗಿನ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು, ಕ್ಷೇತ್ರದಲ್ಲಿ ಮುಂದಿನ ಕೆಲಸಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಸಿದ್ದಾರೆ.
ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಿದ್ದು, ವಯನಾಡಿನ ಅಭಿವೃದ್ಧಿ ಹಾಗೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ವಯನಾಡು ಲೋಕಸಭಾ ಉಪಚುನಾವಣೆಯ ಮತ ಎಣಿಕೆಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಪ್ರಿಯಾಂಕಾ ಜಯಗಳಿಸಿದ್ದರು. ಈ ವರ್ಷ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿ ಗೆಲುವಿನ ಅಂತರಕ್ಕಿಂತಲೂ ಅಧಿಕ ಮತಗಳ ಅಂತರದಿಂದ ಪ್ರಿಯಾಂಕಾ ಜಯ ಸಾಧಿಸಿದ್ದರು.
ಸಿಪಿಐ (ಎಂ) ನೇತೃತ್ವದ ಎಲ್ಡಿಎಫ್ನ ಸತ್ಯನ್ ಮೊಕೇರಿ ಅವರನ್ನು ಸೋಲಿಸಿದ್ದ ಪ್ರಿಯಾಂಕಾ ಆರು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು.