Sunday, July 20, 2025
Google search engine
Homeರಾಜಕೀಯಬಿಜೆಪಿಗೆ ಮಹಾರಾಷ್ಟ್ರ ಸಿಎಂ ಪಟ್ಟ, 2 ಪಕ್ಷಗಳಿಗ ಡಿಸಿಎಂ ಸ್ಥಾನ?

ಬಿಜೆಪಿಗೆ ಮಹಾರಾಷ್ಟ್ರ ಸಿಎಂ ಪಟ್ಟ, 2 ಪಕ್ಷಗಳಿಗ ಡಿಸಿಎಂ ಸ್ಥಾನ?

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆದ ನಂತರ ಮಹಾಯುತಿ ಮೈತ್ರಿಕೂಟದಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಮುಂದುವರಿದಿದ್ದು, ಬಿಜೆಪಿ ಅಧಿಕಾರ ಪಡೆಯುವ ಸಾಧ್ಯತೆ ಇದ್ದು, ಮಿತ್ರ ಪಕ್ಷಗಳಿಗೆ ಡಿಸಿಎಂ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇದೆ.

ಪ್ರಧಾನಿ ಮೋದಿ ಜೊತೆ ಮಾತನಾಡಿದ್ದು, ಅವರ ತೀರ್ಮಾನವೇ ಅಂತಿವಾಗಿದ್ದು, ಅವರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಏಕನಾಥ್ ಶಿಂಧೆ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಸಿಎಂ ರೇಸ್ ನಿಂದ ಹೊರಗುಳಿಯುವ ಸೂಚನೆ ನೀಡಿದ್ದಾರೆ.

ಹಂಗಾಮಿ ಸಿಎಂ ಏಕನಾಥ್ ಶಿಂಧೆ ಅವರಿಗೆ ಕೇಂದ್ರ ಸರ್ಕಾರದಲ್ಲಿ ಸಂಪುಟ ಸಚಿವ ಸ್ಥಾನ ಅಥವಾ ದೇವೇಂದ್ರ ಫಡ್ನವಿಸ್ ಅವರ ನಾಯಕತ್ವದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಏಕನಾಥ್ ಶಿಂಧೆ ಕೇಂದ್ರದಲ್ಲಿ ಸಚಿವ ಸ್ಥಾನ ಅಥವಾ ಬಿಜೆಪಿ ನೀಡುವ ಉಪಮುಖ್ಯಮಂತ್ರಿ ಸ್ಥಾನದ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳುತ್ತವೆ.

ಮುಖ್ಯಮಂತ್ರಿಯಾಗದಿದ್ದರೆ ಮಹಾಯುತಿ ಸರ್ಕಾರದ ಸಂಚಾಲಕರನ್ನಾಗಿ ಮಾಡಬೇಕು ಎಂದು ಬಿಜೆಪಿಯ ಉನ್ನತ ನಾಯಕರನ್ನು ಏಕನಾಥ್ ಶಿಂಧೆ ಕೋರಿದ್ದಾರೆಂದು ವರದಿಯಾಗಿದೆ. ಕಲ್ಯಾಣ ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ತಮ್ಮ ಪುತ್ರ ಡಾ.ಶ್ರೀಕಾಂತ್ ಶಿಂಧೆ ಅವರನ್ನು ಫಡ್ನವೀಸ್ ಸರ್ಕಾರದಲ್ಲಿ ಡಿಸಿಎಂ ಮಾಡಬೇಕೆಂಬ ಪ್ರಸ್ತಾಪವನ್ನೂ ಅವರು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಈ ಬೆಳವಣಿಗೆಗೆ ಬಿಜೆಪಿ ಇನ್ನೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಮೂಲಗಳು ವಿವರಿಸಿದ್ದು, ಈ ಭಿನ್ನಾಭಿಪ್ರಾಯದಿಂದಾಗಿ ಮಹಾರಾಷ್ಟ್ರದಲ್ಲಿ ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ವಿಳಂಬವಾಗುತ್ತಿದೆ.

ಬಿಜೆಪಿ ಏಕನಾಥ್ ಶಿಂಧೆಯವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದಿದ್ದರೆ, ಅದು ಕಾರ್ಯಕರ್ತರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಶಿವಸೇನೆಯ ನಾಯಕರು ಹೇಳುತ್ತಿದ್ದಾರೆ.

ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಲು ಶಿಂಧೆ ಅವರನ್ನು ಬಳಸಿಕೊಂಡು ನಂತರ ಅವರನ್ನು ಬಿಜೆಪಿ ತಿರಸ್ಕರಿಸಿತು ಎಂಬ ಸಂದೇಶ ರವಾನೆಯಾಗುವುದನ್ನು ತಡೆಯಲು ಅವರಿಗೇ ಸಿಎಂ ಪಟ್ಟ ಕಟ್ಟಬೇಕು ಎಂಬದು ಪಕ್ಷದವರ ವಾದವಾಗಿದೆ. ಜೊತೆಗೆ ಇದು ಉದ್ಧವ್ ಠಾಕ್ರೆ ಬಣಕ್ಕೆ ತಮ್ಮ ಶಕ್ತಿ ಮರಳಿ ಪಡೆಯುವ ಅವಕಾಶವನ್ನು ನೀಡುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 132 ಸ್ಥಾನ ಗೆದ್ದಿದ್ದು, ಬಹುಮತ ಪಡೆಯಲು ಕೇವಲ 12 ಸ್ಥಾನಗಳ ಕೊರತೆ ಇದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ 57 ಹಾಗೂ ಅಜಿತ್ ಪವಾರ್ ಸಾರಥ್ಯದ ಎನ್ ಸಿಪಿ 47 ಸ್ಥಾನಗಳನ್ನು ಗೆದ್ದಿದ್ದು ಒಂದು ಪಕ್ಷದ ಬೆಂಬಲ ದೊರೆತರೂ ಬಹುಮತ ಸಾಬೀತುಪಡಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಸಿಎಂ ಸ್ಥಾನ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.

ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲಾಗುವುದು ಎಂದು ಭಾರತೀಯ ಜನತಾ ಪಕ್ಷದ ನಾಯಕ ಅಶೋಕ್ ಚವಾಣ್ ಹೇಳಿದ್ದಾರೆ.

ಬುಧವಾರ ಎಎನ್‌ಐ ಜೊತೆ ಮಾತನಾಡಿದ ಅಶೋಕ್ ಚವಾಣ್, “ಮೂರು ಪಕ್ಷಗಳ ಮೈತ್ರಿ ಇದೆ. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಮಹಾರಾಷ್ಟ್ರ ನೂತನ ಸಿಎಂ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.

ಫಲಿತಾಂಶ ಪ್ರಕಟವಾಗಿ ಕೇವಲ 4 ದಿನಗಳು ಆಗಿರುವುದರಿಂದ ಯಾವುದೇ ವಿಳಂಬವಿಲ್ಲ. ರಾಮದಾಸ್ ಅಠವಳೆ ಅವರು ಸ್ಥಿರ ಸರ್ಕಾರ ರಚನೆಯಾಗಲಿದೆ ಎಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

ಈ ಹಿಂದೆ ನವೆಂಬರ್ 26ರಂದು, ಕೇಂದ್ರ ಸಚಿವ ರಾಮದಾಸ್ ಅಠವಳೆ ಮತ್ತು ದೇವೇಂದ್ರ ಫಡ್ನವಿಸ್ ಮಹಾಯುತಿ ಸರ್ಕಾರವನ್ನು ಮುನ್ನಡೆಸಬೇಕು. ಮಹಾರಾಷ್ಟ್ರದ ಜನರು ಅವರನ್ನು ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ ಮತ್ತು ಏಕನಾಥ್ ಶಿಂಧೆ ಡಿಸಿಎಂ ಆಗಬಹುದು ಅಥವಾ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರೂ ಆಗಬಹುದು ಎಂದು ಹೇಳಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments