ರೈಲು ಪ್ರಯಾಣ ದರವನ್ನು ಪ್ರತೀ 500 ಕಿಲೋ ಮೀಟರ್ ಗೆ 10 ರೂ. ಏರಿಸುವ ಮೂಲಕ ಕೇಂದ್ರ ಸರ್ಕಾರ ಹೊಸ ವರ್ಷದ ಸಂಭ್ರಮದಲ್ಲಿದ್ದ ಪ್ರಯಾಣಿಕರಿಗೆ ಆಘಾತ ನೀಡಿದೆ.
ಕೇಂದ್ರ ರೈಲ್ವೆ ಇಲಾಖೆ ಡಿಸೆಂಬರ್ 26ರಿಂದ ಅನ್ವಯವಾಗುವಂತೆ ರೈಲು ಪ್ರಯಾಣ ದರವನ್ನು ಏರಿಸಲಾಗಿದೆ. ಆದರೆ ಸರ್ಬಮನ್ ರೈಲು ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡಲಾಗಿಲ್ಲ.
ಪ್ರಥಮ ದರ್ಜೆ ರೈಲು ಪ್ರಯಾಣದಲ್ಲಿ 215 ಕಿ.ಮೀ. ದೂರದವರೆಗೆ ಯಾವುದೇ ದರ ಏರಿಕೆ ಮಾಡಲಾಗಿಲ್ಲ. ಆದರೆ ೨೧೫ ಕಿ.ಮೀ. ನಂತರ ಪ್ರತೀ ಕಿ.ಮೀ.ಗೆ 1 ಪೈಸೆಯಷ್ಟು ಏರಿಕೆ ಮಾಡಲಾಗಿದೆ.
ಹವಾನಿಯಂತ್ರಿತ ರಹಿತ ಎಕ್ಸ್ ಪ್ರೆಸ್ ರೈಲುಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಪ್ರತೀ ಕಿ.ಮೀ.ಗೆ 2 ಪೈಸೆ ಹಾಗೂ ಹವಾನಿಯಂತ್ರಿತ ರೈಲುಗಳಲ್ಲಿ ಪ್ರತೀ ಕಿ.ಮೀ.ಗೆ 2 ಪೈಸೆ ಟಿಕೆಟ್ ದರ ಏರಿಕೆ ಮಾಡಲಾಗಿದೆ.
ಹೊಸ ದರದ ಅನ್ವಯ ಎಸಿ ರಹಿತ 500 ಕಿ.ಮೀ. ದೂರದವರೆಗೆ ಪ್ರಯಾಣ ದರ 10 ರೂ.ವರೆಗೆ ಏರಿಕೆ ಮಾಡಿದಂತಾಗಿದೆ. ಕ್ರಿಸ್ ಮಸ್ ಮತ್ತು ಹೊಸ ವರ್ಷದ ಸಂಭ್ರಮದಲ್ಲಿದ್ದ ಪ್ರಯಾಣಿಕರಿಗೆ ಆಘಾತವಾಗಿದೆ. ದರ ಏರಿಕೆಯಿಂದ ರೈಲ್ವೆ ಇಲಾಖೆಗೆ ವಾರ್ಷಿಕ 600 ಕೋಟಿ ರೂ. ಹೆಚ್ಚುವರಿ ಆದಾಯವಾಗಲಿದೆ.
ಕಳೆದ ದಶಕದಿಂದ ಹೊಸ ರೈಲು ಮಾರ್ಗ ಹಾಗೂ ರೈಲ್ವೆ ಸೇವೆಯನ್ನು ವಿಸ್ತರಿಸಲಾಗಿದೆ. ಇದರಿಂದ ಮಾನವ ಸಂಪನ್ಮೂಲ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರಿಂದ ರೈಲ್ವೆ ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


