ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಚಾಕು ಇರಿದಿದ್ದ ಆರೋಪಿಯನ್ನು ಮುಂಬೈ ಪೊಲೀಸರು 70 ಗಂಟೆಗಳಲ್ಲಿ ಬಂಧಿಸಿದ್ದು, 5 ತಿಂಗಳ ಹಿಂದೆಯಷ್ಟೇ ಮುಂಬೈಗೆ ಬಂದಿದ್ದ ಬಾಂಗ್ಲಾದೇಶೀ ಪ್ರಜೆ ಎಂಬ ಆಘಾತಕಾರಿ ಸುದ್ದಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸೈಫ್ ಅಲಿ ಖಾನ್ ಮನೆಯಿಂದ 35 ಕಿ.ಮೀ. ದೂರದ ಥಾಣೆಯ ಕಾಸರವಡಳ್ಳಿಯ ಹಿರಾನಂದನಿ ಎಸ್ಟೇಟ್ ಬಳಿ ಭಾನುವಾರ ಮುಂಜಾನೆ ಆರೋಪಿಯನ್ನು ಬಂಧಿಸಲಾಗಿದ್ದು, 30 ವರ್ಷದ ಮೊಹಮದ್ ಶರಿಫುಲ್ ಇಸ್ಲಾಮ್ ಶಹಜಾದ್ ಮೂಲತಃ ಬಾಂಗ್ಲಾದೇಶಿ ಪ್ರಜೆಯಾಗಿದ್ದಾನೆ.
ಆರೋಪಿ ಮನೆಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಸೈಫ್ ಅಲಿ ಖಾನ್ ಅವರ ಬಾಂದ್ರಾ ನಿವಾಸಕ್ಕೆ ನುಗ್ಗಿದ್ದ. ಈ ವೇಳೆ ಸೈಫ್ ಅಲಿ ಖಾನ್ ಅವರಿಗೆ 6 ಬಾರಿ ಚಾಕು ಇರಿದಿದ್ದು, ಸೈಫ್ ಅಲಿ ಖಾನ್ ಕುತ್ತಿಗೆ ಮತ್ತು ಸ್ಪೈನ್ ಕಡೆ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ.
ಆರೋಪಿ ಬಳಿ ಯಾವುದೇ ಭಾರತೀಯ ದಾಖಲೆಗಳು ಪತ್ತೆಯಾಗಿಲ್ಲ. ಕೆಲವು ದಾಖಲೆಗಳು ಪತ್ತೆಯಾಗಿದ್ದು, ಅವು ಬಾಂಗ್ಲಾದೇಶಿ ಪ್ರಜೆ ಎಂಬುದು ತಿಳಿಯುತ್ತಿದೆ. ಪ್ರಾಥಮಿಕ ತನಿಖೆ ಕೂಡ ಆರಂಭವಾಗಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.
ಬಾಂಗ್ಲಾದೇಶದಿಂದ 5 ತಿಂಗಳ ಹಿಂದೆ ಬಂದು ಮುಂಬೈನಲ್ಲಿ ವಾಸವಾಗಿದ್ದು, ಬಿಜೊಯ್ ದಾಸ್ ಎಂಬ ಸುಳ್ಳು ಹೆಸರಿನಿಂದ ಮನೆಕೆಲಸದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.