ಅಮೆರಿಕದಲ್ಲಿ ಇದ್ದಾಗಲೇ ಬಾಗಲಕೋಟೆಯ ಮುಧೋಳದ ಸಿದ್ದರಾಮಯೇಶ್ವರ ನಗರದಲ್ಲಿರುವ ತನ್ನ ಮನೆಯಲ್ಲಿ ಕಳ್ಳತನ ಮಾಡಲು ಬಂದ ಚೆಡ್ಡಿ ಕಳ್ಳರ ಗ್ಯಾಂಗ್ ಅನ್ನು ಸ್ಟಾಫ್ಟ್ ವೇರ್ ಇಂಜಿನಿಯರ್ ಆಗಿರುವ ಯುವತಿ ಓಡಿಸಿ ಗಮನ ಸೆಳೆದಿದ್ದಾರೆ.
ಸಿದ್ದರಾಮೇಶ್ವರ ನಗರದಲ್ಲಿರುವ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಹನುಮಂತಗೌಡ ಸಂಕಪ್ಪನವರ ದಂಪತಿ ಮನೆಯಲ್ಲಿ ವಾಸಿಸುತ್ತಿರುವುದರ ಮಾಹಿತಿ ಸಂಗ್ರಹಿಸಿದ ʻಚಡ್ಡಿ ಕಳ್ಳರ ಗ್ಯಾಂಗ್’ ಕಳ್ಳತನಕ್ಕೆ ಮುಂದಾಗಿತ್ತು. ಇದನ್ನು ಅಮೆರಿಕದಲ್ಲಿ ನೆಲೆಸಿರುವ ಪುತ್ರಿ ಶೃತಿ ತಮ್ಮ ಮೊಬೈಲ್ನಲ್ಲಿರುವ ಸಿಸಿಟಿವಿ ಆ್ಯಪ್ ಮೂಲಕ ಗಮನಿಸಿ, ಮನೆಗೆ ನುಗ್ಗಿದ ಕಳ್ಳರನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯ ಸಿಸಿ ಕ್ಯಾಮೆರಾದ ಲಿಂಕ್ಗಳನ್ನು ಶೃತಿ ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡಿದ್ದಾರೆ. ಮೊಬೈಲ್ ನೋಡುತ್ತಿದ್ದಾಗ ಕಳ್ಳರು ಮನೆ ಪ್ರವೇಶಿಸುತ್ತಿರುವುದನ್ನು ನೋಡಿದ ತಕ್ಷಣ ಮನೆಗೆ ಕರೆ ಮಾಡಿರುವ ಅವರು, ಪೋಷಕರನ್ನು ಎಚ್ಚರಿಸಿದ್ದಾರೆ. ಮನೆಯಲ್ಲಿದ್ದವರು ಎಚ್ಚರಗೊಂಡಿರುವ ವಿಷಯ ತಿಳಿದ ಕಳ್ಳರು ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಮೂಲಕ ನಡೆಯಬೇಕಾದ ಅನಾಹುತ ತಪ್ಪಿದೆ.
ನಿವೃತ್ತ ಪಿಡಬ್ಲೂಡಿ ಇಂಜಿನಿಯರ್ ಆಗಿರುವ ಹನುಮಂತಗೌಡ ಅವರು ತಮ್ಮ ಪತ್ನಿಯೊಂದಿಗೆ ಸಿದ್ದರಾಮೇಶ್ವರ ನಗರದಲ್ಲಿ ವಾಸವಿದ್ದಾರೆ. ಇವರ ಓರ್ವ ಪುತ್ರಿ ಶೃತಿ ಅವರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೊಬ್ಬ ಮಗಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ನಾಲ್ವರು ಕಳ್ಳರು ರಾತ್ರಿ 1ರಿಂದ 2 ಸುಮಾರು ರಾಜಾರೋಷವಾಗಿ ಮನೆ ಪ್ರವೇಶಿಸಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಪೊಲೀಸರು, ಕಳ್ಳರಿಗಾಗಿ ಹುಡುಕಾಟ ನಡೆಸಿದರು ಎಂದು ಹನುಮಂತಗೌಡ ಸಂಕಪ್ಪನವರ ಮಾಹಿತಿ ನೀಡಿದರು.
“ಇದೇ ಪ್ರದೇಶದಲ್ಲಿ ಮತ್ತೊಬ್ಬರ ಮನೆ ಕಳ್ಳತನವಾಗಿದ್ದು, ಇದೇ ಗ್ಯಾಂಗ್ನ ಕೈವಾಡವಿರುವ ಅನುಮಾನವಿದೆ. ಹನುಮಂತಗೌಡರ ಮನೆಗೆ ಕಳ್ಳತನ ಯತ್ನಕ್ಕೂ ಮುನ್ನ ಅಶೋಕ ಕರಿಹೊನ್ನ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಅವರ ಮನೆಯಲ್ಲಿದ್ದ 11 ಗ್ರಾಂ ಚಿನ್ನ 40 ಸಾವಿರ ನಗದು ದೋಚಿ ಪರಾರಿಯಾಗಿರುವ ಮಾಹಿತಿ ಇದೆ.
ಅಮೆರಿಕದಲ್ಲಿ ನೆಲೆಸಿರುವ ಶೃತಿ ಅವರ ಸಮಯಪ್ರಜ್ಞೆಯಿಂದ ಅವರ ಮನೆ ಕಳ್ಳತನದಿಂದ ಬಚಾವ್ ಆಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ” ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿದರು.


