ನವದೆಹಲಿ: ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಹಾಗೆಯೇ ದೇಶದ ಪೂಜಾ ಸ್ಥಳಗಳನ್ನು ಕಾಯ್ದುಕೊಳ್ಳಬೇಕು ಎಂಬ ಕಾಯಿದೆಯ ಸಿಂಧುತ್ವ ಮರುಸ್ಥಾಪಿಸಬೇಕು ಎಂದು ಎಐಎಂಐಎಂನ ಅಸಾದುದ್ದಿನ್ ಒವೈಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸ್ವಾತಂತ್ರ್ಯಗೊಂಡ 1947ರ ಆಗಸ್ಟ್ 15ರಂದು ಇದ್ದಂತೆಯೇ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳುವ 1991ರ ಪೂಜಾ ಸ್ಥಳಗಳ ಕಾನೂನನಿನ ಜಾರಿ ಕುರಿತಂತ ಓವೈಸಿ ಸಲ್ಲಿಸಿರುವ ಮನವಿಯ ವಿಚಾರಣೆಗೆ ಕೋರ್ಟ್ ಒಪ್ಪಿಕೊಂಡಿದೆ.
ಈ ಸಂಬಂಧ ಸಲ್ಲಿಸಲಾಗಿರುವ ಬಾಕಿ ಅರ್ಜಿಗಳ ಜೊತೆಯೇ ಒವೈಸಿ ಅವರ ಅರ್ಜಿಯನ್ನೂ ಫೆಬ್ರುವರಿ 17ರಂದು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನು ಒಳಗೊಂಡ ಪೀಠ ಹೇಳಿದೆ.
ವಕೀಲ ಫಜೈಲ್ ಅಹಮ್ಮದ್ ಅಯ್ಯೂಬಿ ಮೂಲಕ ಡಿಸೆಂಬರ್ 17ರಂದು ಓವೈಸಿ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು.
1991ರ ಪೂಜಾ ಸ್ಥಳಗಳ ಕಾಯ್ದೆ ಸಂಬಂದ ಸಲ್ಲಿಸಲಾಗಿರುವ ಹಲವು ಅರ್ಜಿಗಳು ಕುರಿತು ಡಿಸೆಂಬರ್ ೧೨ರಂದು ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ಪೀಠವು, ಮಸೀದಿ ಅಥವಾ ದರ್ಗಾ ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ವಶಕ್ಕೆ ನೀಡಬೇಕೆಂದು ಕೋರಲಾದ ಅರ್ಜಿಗಳ ಕುರಿತಂತೆ ಕೆಳ ನ್ಯಾಯಾಲಯಗಳು ಯಾವುದೇ ಆದೇಶ ನೀಡದಂತೆ ನಿರ್ಬಂಧಿಸಿ ಆದೇಶ ನೀಡಿತ್ತು.
ಈ ಸಂಬಂಧ ವಕೀಲರಾದ ಅಶ್ವಿನಿ ಉಪಾಧ್ಯಾಯ ಸೇರಿದಂತೆ 6 ಮಂದಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
1991ರ ಧಾರ್ಮಿಕ ಸ್ಥಳಗಳ ಪೂಜಾ ಕಾಯ್ದೆಯು ಯಾವುದೇ ಪೂಜಾ ಸ್ಥಳದ ಪರಿವರ್ತನೆಯನ್ನು ನಿಷೇಧಿಸುತ್ತದೆ. 1947ರ ಆಗಸ್ಟ್ 15ರಲ್ಲಿ ಅಸ್ತಿತ್ವದಲ್ಲಿದ್ದ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಈ ಕಾಯ್ದೆಯ ಪರಿಣಾಮಕಾರಿ ಜಾರಿಗೆ ಓವೈಸಿ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದರು.
ಅಧಿಕಾರಿಗಳಿಗೆ ತರಾಟೆ: ಇದೇ ವೇಳೆ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ನಿರಶನ ಅಂತ್ಯಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿದ ಅಧಿಕಾರಿಗಳನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಅಧಿಕಾರಿಗಳು ಮತ್ತು ಕೆಲವು ರೈತ ಮುಖಂಡರು ತಪ್ಪು ಅಭಿಪ್ರಾಯವನ್ನು ಮೂಡಿಸುತ್ತಿದ್ದಾರೆ ಎಂದು ಪಂಜಾಬ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ.