ಪ್ರಧಾನಿ ನರೇಂದ್ರ ಮೋದಿ ಜೊತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಬೆನ್ನಲ್ಲಿಯೇ 119 ಅಕ್ರಮ ವಲಸಿಗರನ್ನು ಹೊತ್ತ ಎರಡು ವಿಮಾನಗಳು ಇಂದು ಪಂಜಾಬ್ ನಲ್ಲಿ ಬಂದಿಳಿಯಲಿವೆ.
ಈಗಾಗಲೇ ಮೊದಲ ಹಂತದಲ್ಲಿ 1 ವಿಮಾನದಲ್ಲಿ ಅಮೆರಿಕದಲ್ಲಿರುವ 104 ಅಕ್ರಮ ಭಾರತೀಯ ವಲಸಿಗರನ್ನು ಭಾರತಕ್ಕೆ ವಾಪಸ್ ತಂದು ಬಿಡಲಾಗಿತ್ತು. ಇದೀಗ ಎರಡನೇ ಹಂತದ ಕಾರ್ಯಾಚರಣೆಯಲ್ಲಿ 2 ವಿಮಾನಗಳಲ್ಲಿ ಕರೆತರಲಾಗುತ್ತಿದೆ ಎಂದು ಹೇಳಲಾಗಿದೆ.
ಅಮೆರಿಕದಲ್ಲಿ ಅಂಕಿ-ಅಂಶಗಳ ಪ್ರಕಾರ 487ಅಕ್ರಮ ಭಾರತೀಯ ವಲಸಿಗರನ್ನು ಗುರುತಿಸಲಾಗಿದ್ದು, ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಕಳುಹಿಸಿಕೊಡಲಾಗುವುದು ಎಂದು ಅಮೆರಿಕ ಭಾರತಕ್ಕೆ ಮಾಹಿತಿ ನೀಡಿತ್ತು.
ಎರಡನೇ ವಿಮಾನ ಫೆಬ್ರವರಿ 15 ಶನಿವಾರ ಪಂಜಾಬ್ ನ ಅಮೃತಸರದಲ್ಲಿರುವ ಶ್ರೀ ಗುರು ರಾಮ್ ದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿರೀಕ್ಷೆಯಿದೆ. ಅದಾದ ಕೆಲವು ದಿನಗಳ ನಂತರ ಮೂರನೇ ವಿಮಾನವು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಡೊನಾಲ್ಡ್ ಟ್ರಂಪ್ ಸರ್ಕಾರ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಚಂಡೀಗಢಕ್ಕೆ ಸೇರಿದ 25 ಮಹಿಳೆಯರು ಮತ್ತು 12 ಅಪ್ರಾಪ್ತ ವಯಸ್ಕರು ಸೇರಿದಂತೆ 104 ದಾಖಲೆರಹಿತ ಭಾರತೀಯರನ್ನು ಗಡೀಪಾರು ಮಾಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣಾ ಮುಖ್ಯಸ್ಥ ಮೈಕೆಲ್ ಬ್ಯಾಂಕ್ಸ್ ಮಾಡಿದ್ದ ಪೋಸ್ಟ್ನಲ್ಲಿ ಕೈಕೋಳ ಹಾಕಿದ್ದ ಭಾರತೀಯ ಪ್ರಜೆಗಳ ಗಡೀಪಾರಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಅಮೆರಿಕದಲ್ಲಿರುವ ಭಾರತೀಯ ವಲಸಿಗರನ್ನು ಕೋಳ ಹಾಕಿ ಕರೆತರುತ್ತಿರುವುದು ಅಮಾನವೀಯ ಎಂದು ಜನರು ಆಕ್ರೋಶ ಹೊರಹಾಕಿದ್ದರು. ಇದೀಗ ಎರಡನೇ ವಿಮಾನದಲ್ಲಿ ಹೇಗೆ ಕರೆ ತರಲಾಗುತ್ತದೆ ಎಂಬ ಮಾಹಿತಿ ಇಲ್ಲದೇ ಹೋದರೂ ನಂತರ ತಿಳಿದು ಬರಲಿದೆ.
ವಿವಾದದ ನಡುವೆ ಸಚಿವರೂ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದರು. ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಗಡೀಪಾರು ವಿಮಾನಗಳನ್ನು ಇಳಿಸುವ ಮೂಲಕ ಅಮೃತಸರದ ಹೆಸರು ಕೆಡಿಸಲು ಪ್ರಯತ್ನಿಸುತ್ತಿದೆ ಎಂದು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಚೀಮಾ ಆರೋಪಿಸಿದ್ದರು.
`ಹರಿಯಾಣ ಅಥವಾ ಗುಜರಾತಲ್ಲಿ ವಿಮಾನವನ್ನು ಏಕೆ ಇಳಿಸಬಾರದು? ಇದು ಸ್ಪಷ್ಟವಾಗಿ ಪಂಜಾಬಿ ಪ್ರತಿಷ್ಠೆಯನ್ನು ಹಾಳುಮಾಡಲು ಬಿಜೆಪಿಯ ಪ್ರಯತ್ನವಾಗಿದೆ. ಈ ವಿಮಾನವು ಅಹಮದಾಬಾದಲ್ಲಿ ಇಳಿಯಬೇಕು ಎಂದು ಅವರು ಪ್ರಶ್ನಿಸಿದ್ದರು.


