ಮುಂಗಾರು ಅಧಿವೇಶನ ಆರಂಭದ ದಿನವೇ ಜಗದೀಪ್ ಧಂಕರ್ ಉಪ ರಾಷ್ಟ್ರಪತಿ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸೋಮವಾರ ಮುಂಗಾರು ಅಧಿವೇಶನ ಆರಂಭವಾಗಿದ್ದು, ಸಂಜೆಯವರೆಗೂ ಯಾವುದೇ ಸುಳಿವು ನೀಡದ ಜಗದೀಪ್ ಧಂಕರ್ ರಾತ್ರಿ ದಿಢೀರನೆ ವೈದ್ಯಕೀಯ ಕಾರಣ ನೀಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸಂವಿಧಾನದ 67(a) ವಿಧಿಯ ಪ್ರಕಾರ ʻಆರೋಗ್ಯ ಸಮಸ್ಯೆ ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆʼ ಎಂದು ಜಗದೀಪ್ ಧಂಕರ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯಸಭಾ ಅಧ್ಯಕ್ಷರೂ ಆಗಿರುವ 74 ವರ್ಷದ ಜಗದೀಪ್ ಆಗಸ್ಟ್ 2022ರಂದು ಅಧಿಕಾರ ಸ್ವೀಕರಿಸಿದ್ದು, 2027ವರೆಗೆ ಅಧಿಕಾರವಧಿ ಹೊಂದಿದ್ದರು. ಅದರಲ್ಲೂ ಬೆಳಿಗ್ಗೆಯಿಂದ ಸಹಜವಾಗಿ ಕೆಲಸದಲ್ಲಿ ನಿರತರಾಗಿದ್ದ ಜಗದೀಪ್ ಸಂಜೆ ವೇಳೆಗೆ ಬದಲಾಗಿದ್ದು, ಮಧ್ಯಾಹ್ನ 1 ಗಂಟೆಯಿಂದ 4.30ರ ನಡುವೆ ನಡೆದ ಬೆಳವಣಿಗೆಗಳು ಏನು ಎಂಬ ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ ಜಗದೀಪ್ ಧಂಕರ್ ಅಕ್ರಮ ಹಣ ಮನೆಯಲ್ಲಿ ಪತ್ತೆಯಾದ ಕಾರಣ ನ್ಯಾಯಮೂರ್ತಿಯೊಬ್ಬ ವಿರುದ್ಧ ಮಹಾಭಿಯೋಗಕ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರ ಸರ್ಕಾರ ಪ್ರಮುಖ ವ್ಯಕ್ತಿಯಿಂದ ಕರೆ ಬಂದ ನಂತರ ಅವರು ರಾಜೀನಾಮೆ ನಿರ್ಧಾರ ಕೈಗೊಂಡರು ಎನ್ನಲಾಗಿದೆ.
ಮತ್ತೊಂದು ಮೂಲಗಳ ಪ್ರಕಾರ ನ್ಯಾಯಾಂಗದ ವಿಷಯದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಕೇಂದ್ರ ಸರ್ಕಾರ ನ್ಯಾಯಮೂರ್ತಿ ಯಶವಂತ್ ದೇಶ್ ಮುಖ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದರೆ, ಸುಪ್ರೀಂಕೋರ್ಟ್ ಈ ವಿಷಯ ದೃಢಪಡಿಸಿರಲಿಲ್ಲ.
ಬೆಳಿಗ್ಗೆಯಿಂದ ಸಂಜೆಯವರೆಗೂ ಎಲ್ಲಾ ಚಟುವಟಿಕೆಗಳಲ್ಲಿ ಸಹಜವಾಗಿ ಇದ್ದ ಜಗದೀಪ್ ಅವರಿಗೆ ಯಾವುದೇ ಅನಾರೋಗ್ಯ ಅಥವಾ ಆರೋಗ್ಯ ಸಮಸ್ಯೆ ಇದ್ದಂತೆ ಕಾಣಲಿಲ್ಲ. ಆದರೆ ರಾತ್ರಿ 9.25ಕ್ಕೆ ದಿಢೀರನೆ ಅನಾರೋಗ್ಯದ ನೆಪವೊಡ್ಡಿ ರಾಜೀನಾಮೆ ನೀಡಿದ್ದು ಅಚ್ಚರಿ ಮೂಡಿಸಿತು.
ಅದರಲ್ಲೂ ಮಧ್ಯಾಹ್ನ 1 ಗಂಟೆಯಿಂದ 4.30ರ ನಡುವೆ ನಡೆದ ಬೆಳವಣಿಗೆ ಏನು? ಯಾರು ಕರೆ ಮಾಡಿದ್ದು, ಏನು ಕಾರಣ ಮತ್ತು ಯಾವ ವಿಷಯಕ್ಕಾಗಿ ರಾಜೀನಾಮೆ ನೀಡಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ ನ್ಯಾಯಮೂರ್ತಿಯ ಮಹಾಭಿಯೋಗದ ಕುರಿತು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.


