ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆಗೆ ಸುಪಾರಿ ಪಡೆದಿದ್ದ 5 ಮಂದಿಯ ಪೈಕಿ ಕಾಲೇಜು ವಿದ್ಯಾರ್ಥಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ಮೂಲದ ಅವಿನಾಶ್, ಸುದರ್ಶನ್, ಮುರುಗೇಶ್, ನರಸಿಂಹ ಅವರನ್ನು ಮಾಲೂರು ಬಳಿಯ ಟೇಕಲ್ ಬಳಿ ಎಸಿಪಿ ರಂಗಪ್ಪ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ನರಸಿಂಹ ಎಂಬಾತ ಕಾಲೇಜು ವಿದ್ಯಾರ್ಥಿಯಾಗಿದ್ಧಾನೆ.
ಬಂಧಿತ ವಿಮಲ್ ಮೂಲಕ ನರಸಿಂಹ ಎಂಬಾತನಿಗೆ ಬಿಕ್ಲು ಶಿವ ಕೊಲೆಗೆ ಸುಪಾರಿ ನೀಡಲಾಗಿತ್ತು ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಕೊಲೆಗೆ ಸಂಚು ರೂಪಿಸಲು ಬಿಕ್ಲು ಶಿವು ಚಲನವಲನದ ಮೇಲೆ ನಿಗಾ ವಹಿಸಲು ಆಟೋ ಶಿವು ಮತ್ತು ಸ್ಯಾಮ್ಯುಯೆಲ್ ಎಂಬುವವರನ್ನು ಈ ಗುಂಪು ನೇಮಿಸಿತ್ತು. ದಿನಕ್ಕೆ 1 ಸಾವಿರ ರೂ.ಗಾಗಿ ಇವರಿಬ್ಬರು ಪ್ರತಿದಿನ ಬಿಕ್ಲು ಶಿವು ಚಲನವಲನ ಹಾಗೂ ಅವರ ಮನೆಗೆ ಹೋಗಿ ಬರುವವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು.
ಬಿಕ್ಲು ಶಿವನ ಫಾಲೋ ಮಾಡಲೆಂದೇ ಹಂತಕರು ಸ್ಕಾರ್ಪಿಯೊ ಕಾರು ಖರೀದಿಸಿದ್ದು, ಈ ಕಾರಿನಲ್ಲಿ ಅವರ ಚಲನವಲನ ಮೇಲೆ ನಿಗಾ ವಹಿಸಲಾಗಿತ್ತು. ನಂತರ ಅದೇ ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫೇಸ್ ಬುಕ್ ನಲ್ಲಿ ನಿಂದಿಸಿದ್ದೇ ಕೊಲೆಗೆ ಕಾರಣ
ಇದೇ ವೇಳೆ ಹಲವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ವೇಳೆ ಹಲವು ಸ್ಫೋಟಕ ವಿಷಯಗಳನ್ನು ಪತ್ತೆ ಹಚ್ಚಿದ್ದು, ಫೇಸ್ ಬುಕ್ ನಲ್ಲಿ ಜಗದೀಶ್ ಅಲಿಯಾಸ್ ಜಗ್ಗನನ್ನು ಪದೇಪದೆ ಬಿಕ್ಲು ಶಿವ ನಿಂದಿಸುತ್ತಿದ್ದುದೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.
ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಭೈರತಿ ಬಸವರಾಜು ಬುಧವಾರ ಮತ್ತೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಈಗಾಗಲೇ ಒಂದು ಬಾರಿ ವಿಚಾರಣೆ ಎದುರಿಸಿರುವ ಭೈರತಿ ಬಸವರಾಜು ಹಲವರ ಬಂಧನದ ನಂತರ ಪ್ರಕರಣದಲ್ಲಿ ಟ್ವಿಸ್ಟ್ ಲಭಿಸಿರುವುದರಿಂದ ಬಂಧನಕ್ಕೆ ಒಳಗಾಗುತ್ತಾರೆಯೇ ಎಂಬ ಗುಮಾನಿ ಎದ್ದಿದೆ.


