ನೀಟ್-ಯುಜಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಪ್ರತಿಷ್ಠಿತ ಏಮ್ಸ್ ನ ಮೂವರು ಏಮ್ಸ್ ವೈದ್ಯರನ್ನು ವಶಕ್ಕೆ ಪಡೆದಿದೆ.
ನೀಟ್-ಯುಜಿ ಪ್ರಕರಣದ ವಿಚಾರಣೆ ಗುರುವಾರ ನಡೆಯಲಿದ್ದು, ಇದರ ಬೆನ್ನಲ್ಲೇ 2021ರ ಬ್ಯಾಚ್ ನ ಪಾಟ್ನಾದ ಏಮ್ಸ್ ಆಸ್ಪತ್ರೆಯ ಮೂವರು ವೈದ್ಯರನ್ನು ಸಿಬಿಐ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದೆ.
ವೈದ್ಯರ ಕಚೇರಿ ಮತ್ತು ಮನೆಗಳಲ್ಲಿರುವ ದಾಖಲೆಗಳನ್ನು ಜಫ್ತಿ ಮಾಡಿದ್ದು, ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದೆ.
ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಪಂಕಜ್ ಕುಮಾರ್ ಮತ್ತು ರಾಜು ಸಿಂಗ್ ಅವರನ್ನು ವಶಕ್ಕೆ ಪಡೆದ ಬೆನ್ನಲ್ಲೇ ಮೂವರು ಏಮ್ಸ್ ವೈದ್ಯರನ್ನು ವಶಕ್ಕೆ ಪಡೆದಿರುವುದು ಕುತೂಹಲ ಮೂಡಿಸಿದೆ.
ಈಗಾಗಲೇ ಪಂಕಜ್ ಕುಮಾರ್ ನನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಗಿದ್ದರೆ, ರಾಜುವನ್ನು 10 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.