ಜುಲೈ 3ನೇ ವಾರದಲ್ಲಿ ನೀಟ್-ಯುಜಿ ಕೌನ್ಸಿಲಿಂಗ್ ನಡೆಸಲಿದ್ದು, ಯಾವುದೇ ಪರಿಷ್ಕರಣೆ ಬಯಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈಗಾಗಲೇ ನೀಟ್-ಯುಜಿ ಪರೀಕ್ಷೆಯನ್ನು ನಡೆಸಲಾಗಿದ್ದು, ಇದರಲ್ಲಿ ದೊಡ್ಡ ಮಟ್ಟದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಅಕ್ರಮಗಳು ನಡೆದಿಲ್ಲ. ಆದ್ದರಿಂದ ನಿಗದಿತ ಸಮಯದಲ್ಲಿ ಕೌನ್ಸಿಲಿಂಗ್ ನಡೆಸುವುದು ನಮ್ಮ ಉದ್ದೇಶವಾಗಿದ್ದು, ಇದರಲ್ಲಿ ಬದಲಾವಣೆ ಮಾಡಲು ಬಯಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿದಾವಿತ್ ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಮೇ 5ರಂದು ನಡೆದ ಪ್ರವೇಶ ಪರೀಕ್ಷೆಯನ್ನು ಮತ್ತೆ ಮಾಡಿದರೆ 24 ಲಕ್ಷ ಅಭ್ಯರ್ಥಿಗಳಿಗೆ ತೊಂದರೆ ಆಗಲಿದೆ. ಅಲ್ಲದೇ ಬಲವಾದ ಕಾರಣವಿಲ್ಲದೇ ಮರು ಪರೀಕ್ಷೆ ಮಾಡುವುದು ಸಮಂಜಸ ಅಲ್ಲ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
ಜುಲೈ ಮೂರನೇ ವಾರದಿಂದ ನಾಲ್ಕು ಹಂತಗಳಲ್ಲಿ ಕೌನ್ಸಿಲಿಂಗ್ ನಡೆಯಲಿದ್ದು, ಇದು ನೇಮಕಾತಿಯ ಕೊನೆಯ ಹಂತವಾಗಿದ್ದು, ಈ ಹಂತದಲ್ಲಿ ಆರಂಭದಿಂದ ಮತ್ತೆ ಪ್ರವೇಶ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ಸುಪ್ರೀಂಕೋರ್ಟ್ ಗೆ ಹೇಳಿದೆ.