ನೀಟ್ ಯುಜಿ ಪರಿಷ್ಕೃತ ಫಲಿತಾಂಶ ಪ್ರಕಟಿಸಲಾಗಿದ್ದು, ಅಗ್ರಸ್ಥಾನ ಪಡೆದವರ ಸಂಖ್ಯೆ 61ರಿಂದ 17ಕ್ಕೆ ಕುಸಿದಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಪ್ರವೇಶ ಪರೀಕ್ಷಾ ಸಂಸ್ಥೆ ಜುಲೈ 26ರಂದು ನೀಟ್-ಯುಜಿ ಮುರ ಪರೀಕ್ಷೆಯ ನಂತರ ಪರಿಷ್ಕೃತ ಪಟ್ಟಿ ಪ್ರಕಟಿಸಿತ್ತು. ಪರಿಷ್ಕೃತ ಫಲಿತಾಂಶದಲ್ಲಿ ಇದೀಗ ಭಾರೀ ಪ್ರಮಾಣದಲ್ಲಿ ಏರುಪೇರು ಕಂಡು ಬಂದಿದೆ.
ಅಗ್ರಸ್ಥಾನ ಪಡೆದ 100 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ನೀಟ್-ಯುಜಿ ಪರೀಕ್ಷೆಯ ಫಲಿತಾಂಶದ ವಿವರ ಗಮನಿಸಲು exams.nta.ac.in ಈ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.
ಪರಿಷ್ಕೃತ ಫಲಿತಾಂಶದಲ್ಲಿ 61 ಅಗ್ರಸ್ಥಾನ ಪಡೆದಿದ್ದ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದ್ದು, ಕೇವಲ 17 ಮಂದಿ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಂದುಳಿದ ವರ್ಗದ ಅಭ್ಯರ್ಥಿ ಮೃದುಲ್ ಮಾನ್ಯ ಆನಂದ್ ಪರಿಷ್ಕೃತ ಫಲಿತಾಂಶ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 3ನೇ ಸ್ಥಾನ ಪಡೆದಿದ್ದ ಮೃದುಲ್ 720 ಅಂಕದೊಂದಿಗೆನ ನಂ.1 ರ್ಯಾಂಕ್ ಗೆ ಲಗ್ಗೆ ಹಾಕಿದರೆ, ಈ ಹಿಂದೆ ಅಗ್ರಸ್ಥಾನ ಪಡೆದಿದ್ದ ವೇದ್ ಎಸ್. ಶಿಂಧೆ 715 ಅಂಕದೊಂದಿಗೆ 25ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಅಗ್ರಸ್ಥಾನ ಪಡೆದ 17 ಅಭ್ಯರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದಾರೆ. 6 ಮಂದಿ 716 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಉಳಿದವರು 715 ಅಂಕ ಪಡೆದಿದ್ದಾರೆ. ಅಗ್ರಸ್ಥಾನ ಪಡೆದ 17 ಅಭ್ಯರ್ಥಿಗಳಲ್ಲಿ ರಾಜಸ್ಥಾನ ಗರಿಷ್ಠ 4 ಸ್ಥಾನ ಪಡೆದರೆ, ಮಧ್ಯಪ್ರದೇಶ 3, ದೆಹಲಿ ಮತ್ತು ಉತ್ತರಪ್ರದೇಶದ ತಲಾ ಇಬ್ಬರು, ಬಿಹಾರ, ಪಂಜಾಬ್, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಛತ್ತೀಸಗಢದ ತಲಾ ಒಬ್ಬರು ಅಗ್ರಸ್ಥಾನ ಗಳಿಸಿದ್ದಾರೆ.
2024ನೇ ಸಾಲಿನ ನೀಟ್-ಯುಜಿ ಪ್ರವೇಶ ಪರೀಕ್ಷೆಯಲ್ಲಿ ದಾಖಲೆಯ 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 10 ಲಕ್ಷ ಪುರುಷರು ಮತ್ತು 13 ಲಕ್ಷ ಮಹಿಳೆಯರು ಇದ್ದರು.