ಗುಜರಿಗೆ ಹಾಕುವ ಅಥವಾ ಹಳೆ ವಾಹನ ನೀಡಿ ಹೊಸ ವಾಹನ ಖರೀದಿಸುವವರಿಗೆ ರಿಯಾಯಿತಿ ನೀಡುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ಧಾರೆ.
ಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ನಡೆದ ಸೊಸೈಟಿ ಆಫ್ ಇಂಡಿಯನ್ ಅಟೊಮೊಬೈಲ್ ಮ್ಯಾನುಫ್ಯಾಕ್ಟರರ್ಸ್ ಅಸೋಸಿಯೇಷನ್ (SIAM) ಸಿಇಒಗಳ ಸಭೆಯಲ್ಲಿ ಹಳೆ ವಾಹನಗಳಿಗೆ ರಿಯಾಯಿತಿ ದರದಲ್ಲಿ ಹೊಸ ವಾಹನ ನೀಡಲು ಸಹಮತ ವ್ಯಕ್ತವಾಗಿದೆ.
ಗುಜರಿ ಹಾಕುವಂತಹ ಅಥವಾ ಹಳೆಯ ವಾಹನಗಳ ಬಗ್ಗೆ ಗುಣಮಟ್ಟದ ಪ್ರಮಾಣಪತ್ರ ಆಧರಿಸಿ ಹಳೆಯ ವಾಹನಗಳನ್ನು ಪಡೆದು ರಿಯಾಯಿತಿ ದರದಲ್ಲಿ ಹೊಸ ವಾಣಿಜ್ಯ ಹಾಗೂ ಪ್ರಯಾಣಿಕ ವಾಹನಗಳನ್ನು ನೀಡಲು ವಾಹನ ಉತ್ಪಾದನಾ ಕಂಪನಿಗಳು ಒಪ್ಪಿಗೆ ಸೂಚಿಸಿವೆ.
ಗುಣಮಟ್ಟದ ಪ್ರಮಾಣ ಪತ್ರ ಆಧರಿಸಿ ಹಳೆಯ ವಾಹನಗಳ ಬದಲಿಗೆ ಹೊಸ ವಾಹನವನ್ನು ರಿಯಾಯಿತಿ ದರದಲ್ಲಿ ನೀಡಲು ಹಲವು ಕಂಪನಿಗಳು ಒಪ್ಪಿಗೆ ಸೂಚಿಸಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತೇನೆ. ಇದರಿಂದ ಸುರಕ್ಷಿತ, ಸುಗಮ ಸಂಚಾರಕ್ಕಾಗಿ ಮುಂದಿನ ಜನಾಂಗಕ್ಕೆ ಸುರಕ್ಷಿತ ಆರ್ಥಿಕತೆಯನ್ನು ನೀಡುವ ಪ್ರಯತ್ನವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಗುಜರಿಗೆ ಹಾಕಬಹುದಾದ ವಾಹನಗಳ ಮೇಲೆ ಶೇ.1.5ರಿಂದ 3.5ರಷ್ಟು ರಿಯಾಯಿತಿಯನ್ನು ಕಂಪನಿಗಳು ನೀಡುವ ಸಾಧ್ಯತೆ ಇದೆ.
ಇದೇ ವೇಳೆ ಕೇಂದ್ರ ಸರ್ಕಾರ ದೇಶಾದ್ಯಂತ 1000 ವಾಹನಗಳ ಗುಜರಿ ಸೆಂಟರ್ ಹಾಗೂ 400 ಸ್ವಯಂಚಾಲಿತ ಫಿಟ್ನೆಸ್ ಸೆಂಟರ್ ಗಳನ್ನು ತೆರೆಯುವುದಾಗಿ ನಿತಿನ್ ಗಡ್ಕರಿ ತಿಳಿಸಿದರು.