ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ದಾಖಲೆಯ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ಸ್ವೀಕರಿಸಿದರು.
ರಾಜಧಾನಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಿತೀಶ್ ಕುಮಾರ್ ಜೊತೆ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ NDAದ ಹಲವಾರು ಹಿರಿಯ ನಾಯಕರು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮತ್ತು ಎನ್‌ಡಿಎ ಬೆಂಬಲದೊಂದಿಗೆ ಹೊಸ ಸರ್ಕಾರ ರಚಿಸಲು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಮುಂದೆ ಹಕ್ಕು ಮಂಡಿಸಿದ ಒಂದು ದಿನದ ನಂತರ ಅವರ ಹೊಸ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.
ಹೊಸ ಸಂಪುಟ ರಚನೆಯ ಭಾಗವಾಗಿ, ಬಿಜೆಪಿ ಮತ್ತು ಜೆಡಿ (ಯು) ಸಚಿವ ಸ್ಥಾನಗಳಲ್ಲಿ ಅತಿ ಹೆಚ್ಚು ಪಾಲನ್ನು ಪಡೆದುಕೊಂಡವು. ಸಮತೋಲಿತ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಎನ್‌ಡಿಎಯ ಸಣ್ಣ ಘಟಕಗಳಿಗೆ ಪ್ರತಿ ಆರು ಶಾಸಕರಿಗೆ ಒಂದು ಸಂಪುಟ ಸ್ಥಾನವನ್ನು ನೀಡಲಾಗಿದೆ.
ನವೆಂಬರ್ 26 ರಿಂದ ಹೊಸದಾಗಿ ರಚನೆಯಾದ ವಿಧಾನಸಭೆಯ ಮೂರು ದಿನಗಳ ಅಧಿವೇಶನ ಆರಂಭವಾಗಲಿದ್ದು, ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಆಯ್ಕೆಯಾಗಲಿದ್ದು, ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಪ್ರೇಮ್ ಕುಮಾರ್ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಮುಂದಿನ ವರ್ಷ ಜನವರಿ 14 ರಂದು ಮಕರ ಸಂಕ್ರಾಂತಿಯ ನಂತರ ಹೊಸ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.



