ಅವಧಿ ಮುಗಿದರೂ ಸರ್ಕಾರಿ ಬಂಗಲೆಗಳನ್ನು ತೊರೆಯದ 200ಕ್ಕೂ ಹೆಚ್ಚು ಮಾಜಿ ಸಂಸದರಿಗೆ ಕೇಂದ್ರ ಗೃಹ ಮತ್ತು ನಗರಾಭಿವೃದ್ಧಿ ಸಚಿವಾಲಯ ನೋಟಿಸ್ ಜಾರಿ ಮಾಡಿದೆ.
ಸಾರ್ವಜನಿಕ ಜಾಗವನ್ನು ಅತಿಕ್ರಮವಾಗಿ ವಶಕ್ಕೆ ಪಡೆದ ನಿಯಮದ ಅನ್ವಯ ನೋಟಿಸ್ ಜಾರಿ ಮಾಡಲಾಗಿದ್ದು, ದೆಹಲಿಯ ಲುಥಯಿಸ್ ನಲ್ಲಿರುವ ಸರ್ಕಾರಿ ಬಂಗಲೆಯನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಸೋಲುಂಡು ಅಧಿಕಾರ ಕಳೆದುಕೊಂಡ ಒಂದು ತಿಂಗಳ ಅವಧಿಯಲ್ಲಿ ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸಬೇಕು ಎಂಬ ನಿಯಮವಿದೆ. ಆದರೆ ಕಳೆದ ಲೋಕಸಭಾ ಚುನಾವಣೆಯ ಸೋಲುಂಡ ನಂತರವೂ ಬಂಗಲೆಯನ್ನು ತೆರವುಗೊಳಿಸಿಲ್ಲ. ಇದರಿಂದ ಹೊಸದಾಗಿ ಆಯ್ಕೆಯಾದ ಸಂಸದರಿಗೆ ಸರ್ಕಾರಿ ಬಂಗಲೆ ಒದಗಿಸಲು ಆಗುತ್ತಿಲ್ಲ.
ಪ್ರಸ್ತುತ 200 ಸಂಸದರಿಗೆ ಕೂಡಲೇ ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ನೀಡುವ ಪ್ರಕ್ರಿಯೆ ಮುಂದುವರಿದಿದ್ದು, ಇನ್ನಷ್ಟು ಹೆಚ್ಚು ಜನರಿಗೆ ನೋಟಿಸ್ ನೀಡಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಒಂದು ವೇಳೆ ಮಾಜಿ ಸಂಸದರು ಬಂಗಲೆ ತೆರವುಗೊಳಿಸದೇ ಇದ್ದಲ್ಲಿ ಬಲವಂತವಾಗಿ ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.