ತೋಳಗಳ ದಾಳಿಯಲ್ಲಿ ಮಗುವೊಂದು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ಬಹರೀಚ್ ಜಿಲ್ಲೆಯಲ್ಲಿ ನಡೆದಿದೆ.
ಬಹರೀಚ್ ಜಿಲ್ಲೆಯಲ್ಲಿ ತೋಳಗಳ ಹಾವಳಿಯಿಂದ ಜನರು ಆತಂಕಗೊಂಡಿದ್ದು, ಕಳೆದ 2 ತಿಂಗಳಲ್ಲಿ 8 ಮಂದಿ ತೋಳಗಳಿಗೆ ಬಲಿಯಾಗಿದ್ದಾರೆ.
ಕಾರಿಘಟ್ ಜಿಲ್ಲೆಯ ಛತ್ತರ್ ಪುರ್ ನಲ್ಲಿ ಸೋಮವಾರ ಮತ್ತು ಮಂಗಳವಾರ ತೋಳಗಳು 3, 6 ಮತ್ತು 9 ವರ್ಷ ವಯಸ್ಸಿನ ಮಕ್ಕಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಗಾಯಗೊಂಡವರಲ್ಲಿ ಒಂದು ಮಗು ಮೃತಪಟ್ಟಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಅಷ್ಟರಲ್ಲಿ ತೋಳಗಳು ರಾಯ್ ಪುರ್ ಜಿಲ್ಲೆ ಕಡೆಗೆ ಹೋಗಿ ಅಲ್ಲಿ 5 ವರ್ಷದ ಮಗುವನ್ನು ಮನೆಯಿಂದ ಹೊತ್ತೊಯ್ದಿವೆ.
ತೋಳಗಳ ದಾಳಿಯಲ್ಲಿ ಇದುವರೆಗೆ 7 ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಹರೀಚ್ ಜಿಲ್ಲಾಧಿಕಾರಿ ಗ್ರಾಮದ ಮುಖಂಡರ ಜೊತೆ ಸಭೆ ನಡೆಸಿ ರಾತ್ರಿ ಹೊತ್ತು ಮನೆಯಲ್ಲಿ ಒಬ್ಬರು ಮಲಗದೇ ಕಾವಲು ಇರುವಂತೆ ಸೂಚಿಸಿದ್ದಾರೆ.