ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ರಾತ್ರಿಯೀಡಿ ಸುರಿದ ಭಾರೀ ಮಳೆಯಿಂದಾಗಿ ನೂರಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.
ಬೆಂಗಳೂರಿನಲ್ಲಿ ಭಾನುವಾರ ಸಂಜೆಯಿಂದಲೇ ಭಾರೀ ಮಳೆಯಾಗಿದ್ದು, ಮರ ಬಿದ್ದಿದ್ದರಿಂದ ಕಾರು, ಬೈಕ್ ಸೇರಿದಂತೆ ಹಲವು ವಾಹನಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
ಪೀಣ್ಯ, ವಿದ್ಯಾಪೀಠ, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ವಿಜಯನಗರ, ನಾಗಬಾವಿ, ಕೆಂಗೇರಿ, ಜಯನಗರ, ಹೆಬ್ಬಾಳ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಗಿದೆ.
ಸಂಜೆ 6.30ರಿಂದ ಸುರಿದ ಮಳೆ ಹಿನ್ನೆಲೆಯಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಭೇಟಿ ನೀಡಿ, ಮಳೆಯಿಂದ ಮೂರ್ನಾಲ್ಕು ಅಡಿ ನೀರು ನಿಂತಿದೆ. ಇದರಿಂದ ನನಗೂ ಭೇಟಿ ನೀಡಲು ತಡವಾಯಿತು ಎಂದರು.
ಮೆಜೆಸ್ಟಿಕ್ ಬಳಿ ಬಸ್ ವೊಂದು ಅಂಡರ್ ಪಾಸ್ ಬಳಿ ಕೆಟ್ಟು ನಿಂತಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಚಾಲಕ ಮಕ್ಕಳು, ಮಹಿಳೆಯರನ್ನು ಇಳಿಸಿ ಸುರಕ್ಷಿತ ಪ್ರದೇಶಕ್ಕೆ ತಲುಪಿಸಿದ್ದಾನೆ ಎಂದು ವರದಿಯೊಂದು ಹೇಳಿದೆ.