Wednesday, August 12, 2026
Google search engine
Homeಕಾನೂನುಸಂಘ-ಸಂಸ್ಥೆಗಳಿಗೆ ಅನುಮತಿ ಕಡ್ಡಾಯ: ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸಂಘ-ಸಂಸ್ಥೆಗಳಿಗೆ ಅನುಮತಿ ಕಡ್ಡಾಯ: ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಘ ಸಂಸ್ಥೆಗಳ ರ‍್ಯಾಲಿ, ಸಭೆ  ನಡಸಲು ಅನುಮತಿ ಕಡ್ಡಾಯಗೊಳಿಸಿ ಹೊರಡಿಸಿದ್ದ ಸುತ್ತೋಲೆಗೆ ತಡೆಯಾಜ್ಞೆ ನೀಡಿದ್ದ ಆದೇಶವನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು  ಧಾರವಾಡ ಹೈಕೋರ್ಟ್​ನ​ ದ್ವಿಸದಸ್ಯ ಪೀಠ ವಜಾಗೊಳಿಸಿದೆ.

ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಮತ್ತು ಗೀತಾ ಕೆ. ಬಿ ಅವರಿದ್ದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿ ಅರ್ಜಿ ವಜಾಗೊಳಿಸಿ ಆದೇಶಿಸಿದ್ದು, ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂಬಂಧ ಏಕ ಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸೂಚಿಸಿದೆ.

ಸರ್ಕಾರದ ಸುತ್ತೋಲೆಗೆ ತಡೆ ನೀಡಿದ್ದ ಏಕ ಸದಸ್ಯ ಪೀಠದ ಆದೇಶ ತೆರವುಗೊಳಿಸುವಂತೆ ಕೋರಿ ದ್ವಿಸದಸ್ಯ ಪೀಠಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಲಾಗಿತ್ತು.

ಮೇಲ್ಮವಿಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಅರ್ಜಿ ಸಲ್ಲಿಸಿದವರ ಪೈಕಿ ಇಬ್ಬರು ಸಂಸ್ಥೆಗಳನ್ನು ಹೊಂದಿದ್ದಾರೆ. ಅವರು ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಮಾಡುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೇ ಕಾರ್ಯಕ್ರಮ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಹೀಗಾಗಿ ತಡೆಯಾಜ್ಞೆಯನ್ನು ತೆರವುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.

ಈ ವೇಳೆ ಪೀಠ, 10 ಜನರು ಸೇರಿದರೆ ಅನುಮತಿ ಬೇಕಾ? ಅದರ ಅವಶ್ಯಕತೆ ಇದೆಯಾ? ಯಾರೋ ಕೆಲವರು ಪಾರ್ಕ್​​ಗಳಲ್ಲಿ ಜೊತೆಯಾಗಿ ಹೋಗುತ್ತಾರೆ. ಅದಕ್ಕೂ ಕೂಡ ಅನುಮತಿ ಬೇಕಾ? ಎಂದು ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿತು.

ವಕೀಲರು, ಸರ್ಕಾರಿ ರಸ್ತೆ ಇರುವುದು ಸಾರ್ವಜನಿಕರ ಓಡಾಟಕ್ಕೆ. ಹೀಗಾಗಿ ಅದು ಸಾರ್ವಜನಿಕರಿಗೆ ಉಪಯೋಗವಾಗಬೇಕು. ಖಾಸಗಿಯವರು ಕಾರ್ಯಕ್ರಮ ಮಾಡಲು ಬೇರೆ ಕಡೆ ಸ್ಥಳ ಬಾಡಿಗೆ ಪಡೆದು ಕಾರ್ಯಕ್ರಮ ಮಾಡಬಹುದು. ಸಾರ್ವಜನಿಕ ಆಸ್ತಿಗಳನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಮಾಡಲಾಗಿದೆ. ಇದರಲ್ಲಿ ಕಾಯ್ದೆ 19ಎ ಉಲ್ಲಂಘನೆಯಾಗಲ್ಲ ಎಂದು ಸರ್ಕಾರದ ಪರ ವಕೀಲರು ಸಮರ್ಥಿಸಿಕೊಂಡರು.

ತಿವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಸರ್ಕಾರದ ಆದೇಶ ಸರಿಯಲ್ಲ. ಇದು ಸಂವಿಧಾನ ಬಾಹಿರವಾಗಲಿದೆ. ಸರ್ಕಾರಿ ಜಾಗ ಇರುವುದೇ ಸಾರ್ವಜನಿಕರ ಬಳಕೆಗಾಗಿಯಾಗಿದೆ. ಇದು ಸಾರ್ವಜನಿಕರ ಹಕ್ಕಿನ ಉಲ್ಲಂಘನೆಯಾಗುತ್ತದೆ. ಪಾರ್ಕುಗಳು ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿ ಇರುತ್ತವೆ. ಅವುಗಳಿಗೆ ನಿರ್ಬಂಧ ಹೇರುವುದು ಸಾರ್ವಜನಿಕರ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ವಾದ ಮಂಡಿಸಿದರು.

ಏನಿದು ಪ್ರಕರಣ?

ಸರ್ಕಾರ(ಪೊಲೀಸ್ ಅಧಿಕಾರಿಗಳ)ದ ಅನುಮತಿ ಪಡೆಯದೇ ನೋಂದಣಿಯಾಗಿರುವ ಅಥವಾ ನೋಂದಣಿಯಾಗದ ಸಂಘ, ಸಂಸ್ಥೆಗಳು, ಖಾಸಗಿ ಸಂಘ, ಸಂಸ್ಥೆಗಳು, ಗುಂಪುಗಳು ಸರ್ಕಾರದ ಸ್ಥಳಗಳಾದ ರಸ್ತೆಗಳು, ಉದ್ಯಾನವನಗಳು, ಆಟದ ಮೈದಾನಗಳು ಅಥವಾ ಕಟ್ಟಡಗಳನ್ನು ಬಳಕೆ ಮಾಡುವುದನ್ನು ಅಕ್ರಮ ಕೂಟ ಎಂದು ಪರಿಗಣಿಸಲಾಗುವುದು ಎಂಬುದಾಗಿ 2025ರ ಅಕ್ಟೋಬರ್ 18ರಂದು ರಾಜ್ಯ ಸರ್ಕಾರದ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.

ಈ ಆದೇಶ ರದ್ದು ಕೋರಿ ಹುಬ್ಬಳ್ಳಿಯ ಪುನಶ್ಚೇತನ ಸೇವಾ ಟ್ರಸ್ಟ್, ವಿ-ಕೇರ್ ಫೌಂಡೇಷನ್ ಸೇರಿ ನಾಲ್ವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಧಾರವಾಡ ಏಕ ಸದಸ್ಯ ಪೀಠವು, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರವು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments