ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ 19 ಪ್ರಯಾಣಿಕರಿದ್ದ ವಿಮಾನ ಟೇಕಾಫ್ ವೇಳೆ ದುರಂತಕ್ಕೀಡಾಗಿ 18 ಮಂದಿ ಮೃತಪಟ್ಟಿದ್ದು, ಪೈಲೆಟ್ ಮಾತ್ರ ಪವಾಡಸದೃಶವಾಗಿ ಪಾರಾದ ಘಟನೆ ಬುಧವಾರ ಸಂಭವಿಸಿದೆ.
ಬುಧವಾರ ಬೆಳಿಗ್ಗೆ ತ್ರಿಭುವನ್ ವಿಮಾನ ನಿಲ್ದಾಣದಲ್ಲಿ ಟೈಕಾಫ್ ಆಗುತ್ತಿದ್ದಾಗಲೇ ನಿಯಂತ್ರಣ ತಪ್ಪಿದ ಮೌರ್ಯ ಏರ್ ಲೈನ್ಸ್ ವಿಮಾನ ನೆಲಕ್ಕಪ್ಪಳಿಸಿದೆ. ಇದರಿಂದ ವಿಮಾನ ಬೆಂಕಿ ಹೊತ್ತಿಕೊಂಡು ಉರಿದಿದ್ದು, 18 ಮಂದಿ ಸಜೀವದಹನಗೊಂಡಿದ್ದಾರೆ.
ವಿಮಾನದಲ್ಲಿ 17 ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಬುಧವಾರ ಬೆಳಿಗ್ಗೆ 11 ಗಂಟೆಗೆ ಪೊಖಾರಾಗೆ ತೆರಳುವಾಗ ಈ ದುರಂತ ಸಂಭವಿಸಿದೆ.
ವಿಮಾನದಲ್ಲಿ ತಾಂತ್ರಿಕ ದೋಷ ಇತ್ತೆ ಎಂಬ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡಿದ್ದು, ಮತ್ತೆ ರನ್ ವೇನಲ್ಲ ಇಳಿಸುವಾಗ ಸ್ಕಿಡ್ ಆಗಿ ಪತನಗೊಂಡಿದೆ. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ವಿಮಾನ ಹೊತ್ತಿ ಉರಿದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.