ಭಿನ್ನಮತಗಳ ನಡುವೆಯೂ ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಸ್ತಾಪ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿಗೆ ಭೇಟಿ ನೀಡಿರುವ ಸುರ್ಜೆವಾಲಾ ಅವರನ್ನು ಭೇಟಿ ಮಾಡಿದ ಹಲವು ಶಾಸಕರು ಸಿಎಂ ಬದಲಾವಣೆ ಮಾಡಿ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿರುವ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಲು 100ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ. ಡಿಕೆಶಿ ಅವರನ್ನು ಸಿಎಂ ಮಾಡದಿದ್ದರೆ ಮುಂಬರುವ 2028ರ ಚುನಾವಣೆಯಲ್ಲಿ ಪಕ್ಷ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ ಎಂದು ಹೇಳಿಕೆ ನೀಡಿದ್ದರು.
ಬಹುತೇಕ ಶಾಸಕರು ಸಿಎಂ ಬದಲಾವಣೆ ಬಗ್ಗೆ ಹಾಗೂ ಪರಿಣಾಮಕಾರಿ ಆಡಳಿತದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅಭಿವೃದ್ಧಿಗೆ ಸಾಕಷ್ಟು ಹಣ ಇಲ್ಲ ಎಂದು ಹೇಳಿದ್ದಾರೆ ಎಂಬ ಆರೋಪಗಳನ್ನು ಸುರ್ಜೆವಾಲಾ ತಿರಸ್ಕರಿಸಿದರು.
ಈ ಎಲ್ಲಾ ಆರೋಪಗಳು ಪ್ರತಿಪಕ್ಷಗಳು ಸೃಷ್ಟಿಸುತ್ತಿರುವ ವದಂತಿ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ನಿಲ್ಲಿಸಿಲಿ ಮತ್ತು ಸರ್ಕಾರ ಪತನಗೊಳ್ಳಲಿ ಎಂದು ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರೈಲು ಟಿಕೆಟ್ ದರ ಏರಿಕೆ ಮಾಡಿದೆ. ದೇಶದಲ್ಲಿ ಆಹಾರ ಧಾನ್ಯಗಳ ಬೆಲೆ ಏರಿಕೆ ಸತತವಾಗಿ ಆಗುತ್ತಲೇ ಇದೆ. ಬಿಜೆಪಿಯವರದ್ದು ಅದಾನಿ ಮಾದರಿ ಆಡಳಿತವಾಗಿದ್ದರೆ, ನಮ್ಮದು ಜನರ ಬದುಕಿನ ಗ್ಯಾರಂಟಿ ತತ್ವವಾಗಿದೆ ಎಂದು ಸುರ್ಜೆವಾಲಾ ವಿವರಿಸಿದರು.


