ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವಿಗೆ ಆರ್ ಸಿಬಿ ಮಾಡಿದ ಎಡವಟ್ಟೇ ಕಾರಣ. ಅತ್ಯಲ್ಪ ಅವಧಿಯಲ್ಲಿ ಮ್ಯಾಜಿಕ್ ಮಾಡಲು ಪೊಲೀಸರೇನು ದೇವರಲ್ಲ, ಅವರು ಮನುಷ್ಯರೇ ಎಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಹೇಳಿದೆ.
ಐಪಿಎಲ್ ಗೆದ್ದ ಆರ್ ಸಿಬಿ ತಂಡದ ಸಂಭ್ರಮಾಚರಣೆಗೆ ಸಾಮಾಜಿಕ ಜಾಲತಾಣದಲ್ಲಿ ಆರ್ ಸಿಬಿ ಆಹ್ವಾನ ನೀಡಿತ್ತು. ಆದರೆ ಅದಕ್ಕಿಂತ ಮುನ್ನ ಪೊಲೀಸರ ಅನುಮತಿಯನ್ನೇ ಪಡೆದಿರಲಿಲ್ಲ. ಈ ಕಾರಣದಿಂದ ಕಾಲ್ತುಳಿತ ದುರಂತ ಸಂಭವಿಸಲು ಕಾರಣ ಎಂದು ನ್ಯಾಯಮಂಡಳಿ ಆದೇಶದಲ್ಲಿ ತಿಳಿಸಿದೆ.
ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಪೊಲೀಸರನ್ನು ಹೊಣೆ ಮಾಡುವುದು ತಪ್ಪು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿರುವ ನ್ಯಾಯ ಮಂಡಳಿ, ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ವಿಕಾಸ್ ವಿರುದ್ಧದ ಅಮಾನತು ಶಿಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಇನ್ನಿಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧದ ಅಮಾನತು ಶಿಕ್ಷೆಯನ್ನು ವಾಪಸ್ ಪಡೆಯಬೇಕು ಎಂದು ಸೂಚಿಸಿದೆ.
ವಿಜಯ್ ಕುಮಾರ್ ವಿಕಾಸ್ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ನ್ಯಾಯಮಂಡಳಿ ಮೊರೆ ಹೋಗಿದ್ದರು. ಅಲ್ಲದೇ ಅಮಾನತು ಶಿಕ್ಷೆಯನ್ನು ಎತ್ತಿ ಹಿಡಿದಿದ್ದ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದರು.
ಸುದೀರ್ಘ ವಿಚಾರಣೆ ನಂತರ ನ್ಯಾಯಮಂಡಳಿ, ವಿಕಾಸ್ ಅವರ ಅಮಾನತು ಆದೇಶ ರದ್ದುಗೊಳಿಸಿದ್ದು, ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಇಬ್ಬರ ವಿರುದ್ಧದ ಅಮಾನತು ಶಿಕ್ಷೆಯನ್ನು ವಾಪಸ್ ಪಡೆಯುವಂತೆ ಸೂಚಿಸಿದೆ.



