ರಾಯಪುರ್: ಕಿಂಗ್ ವಿರಾಟ್ ಕೊಹ್ಲಿ ಸಿಡಿಸಿದ ಶತಕದ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಮರಳಿ ಅಗ್ರಸ್ಥಾನಕ್ಕೇರಿತು.
ರಾಯಪುರದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಚೇಸಿಂಗ್ ಮಾಡಲು ನಿರ್ಧರಿಸಿದ ಆರ್ ಸಿಬಿ, ಕೆಕೆಆರ್ ಒಡ್ಡಿದ 193 ರನ್ ಗಳ ಸವಾಲನ್ನು ಯಶಸ್ವಿಯಾಗಿ ಬೆಂಬತ್ತಿ ರೋಚಕ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಆರ್ ಸಿಬಿ 12 ಪಂದ್ಯಗಳಲ್ಲಿ 8 ಜಯ ಹಾಗೂ 4 ಸೋಲಿನೊಂದಿಗೆ 16 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದರೆ, ಗುಜರಾತ್ ಟೈಟಾನ್ಸ್ ರನ್ ಸರಾಸರಿಯಲ್ಲಿ ಹಿಂದೆ ಬಿದ್ದು 2ನೇ ಸ್ಥಾನಕ್ಕೆ ಜಾರಿತು. ಕೆಕೆಆರ್ 11 ಪಂದ್ಯಗಳಲ್ಲಿ 4 ಗೆಲುವು ಹಾಗೂ 6 ಸೋಲಿನೊಂದಿಗೆ 9 ಅಂಕ ಗಳಿಸಿದ್ದು, ತವರಿನಲ್ಲಿ ನಡೆಯುವ ಮೂರು ಪಂದ್ಯಗಳನ್ನೂ ಗೆದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸುವ ಅರ್ಹತೆ ಪಡೆಯುವ ಆಸೆ ಇದೆ.
ಆರ್ ಸಿಬಿ ತಂಡ ಆರಂಭದಲ್ಲೇ ಬೆಥಾಲಿ (15) ವಿಕೆಟ್ ಕಳೆದುಕೊಂಡರೂ ದೇವದತ್ ಪಡಿಕ್ಕಲ್ ಮತ್ತು ಕೊಹ್ಲಿ 2ನೇ ವಿಕೆಟ್ ಗೆ 92 ರನ್ ಜೊತೆಯಾಟದಿಂದ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು.
ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 39 ರನ್ ಬಾರಿಸಿ ಔಟಾದರೆ, ಕೊನೆಯವರೆಗೂ ತಂಡವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿ ಶತಕ ಗಳಿಸಿ ಸಂಭ್ರಮಿಸಿದರು.
ವಿರಾಟ್ ಕೊಹ್ಲಿ 58 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ವರ ಐಪಿಎಲ್ ನಲ್ಲಿ 9ನೇ ಶತಕವಾಗಿದೆ. ಅಲ್ಲದೇ ಟಿ-20ಯಲ್ಲಿ 14,000 ರನ್ ಪೂರೈಸಿದ ಮೊದಲ ಭಾರತೀಯ ಎಂಬ ಮತ್ತೊಂದು ದಾಖಲೆ ಬರೆದರು. ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ನೊಂದಿಗೆ 105 ರನ್ ಬಾರಿಸಿ ಔಟಾಗದೇ ಉಳಿದರು. ಅಲ್ಲದೇ ಕೊಹ್ಲಿ ಈ ಋತುವಿನಲ್ಲಿ ಗಳಿಸಿದ ಮೊದಲ ಶತಕವಾಗಿದೆ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೆಕೆಆರ್ ತಂಡ ಫಿನ್ ಅಲಾನ್ (19) ಮತ್ತು ಅಜಿಂಕ್ಯ ರಹಾನೆ (18) ಸಾಧಾರಣ ಮೊತ್ತಕ್ಕೆ ಔಟಾದ ನಂತರ ರಘುವಂಶಿ ಅರ್ಧಶತಕ ಹಾಗೂ ರಿಂಕು ಸಿಂಗ್ ಮತ್ತು ಕೆಮರೂನ್ ಗ್ರೀನ್ ಆಟದಿಂದ ಉತ್ತಮ ಮೊತ್ತ ಕಲೆಹಾಕಿತು.
ರಘುವಂಶಿ 46 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 71 ರನ್ ಬಾರಿಸಿದರೆ, ಕೆಮರೂನ್ ಗ್ರೀನ್ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 32 ರನ್ ಗಳಿಸಿದರೆ, ರಿಂಕು ಸಿಂಗ್ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 49 ರನ್ ಬಾರಿಸಿ ಔಟಾಗದೇ ಉಳಿದರು.



