ಫ್ರಾನ್ಸ್ ನ ಸ್ಟಾರ್ ಆಟಗಾರ ಕೈಲಿಯಾನ್ ಮೆಬೆಪೆ ಸ್ವೀಡನ್ ವಿರುದ್ಧ ಡಬಲ್ ಗೋಲು ಬಾರಿಸಿ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ನಾಕೌಟ್ ಹಂತದಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ದಾಖಲೆ ಬರೆದಿದ್ದಾರೆ.
ಮಂಗಳವಾರ ತಡರಾತ್ರಿ ನಡೆದ 32ರ ಹಂತದ ಪಂದ್ಯದಲ್ಲಿ ಮೆಬೆಪೆ ಸಿಡಿಸಿದ 2 ಗೋಲುಗಳ ಸಹಾಯದಿಂದ ಫ್ರಾನ್ಸ್ ತಂಡ 3-0 ಗೋಲುಗಳಿಂದ ಸ್ವೀಡನ್ ತಂಡವನ್ನು ಮಣಿಸಿ 16ರ ಘಟ್ಟಕ್ಕೆ ಲಗ್ಗೆ ಹಾಕಿತು.
ಅದ್ಭುತ ಫಾರ್ಮ್ ಕಂಡುಕೊಂಡಿರುವ 28 ವರ್ಷದ ಮೆಬೆಪೆ ಅಂತಾರಾಷ್ಟ್ರೀಯ ನಾಕೌಟ್ ಪಂದ್ಯಗಳಲ್ಲಿ ೧೦ ಗೋಲು ಬಾರಿಸಿ ಜರ್ಮನಿಯ ಮಿರಸ್ಲಾವೊ ಕ್ಲೋಸ್ ಅವರ ದಾಖಲೆ ಮುರಿದರು.
ಬ್ರೆಜಿಲ್ ನ ಮಾಜಿ ಸ್ಟಾರ್ ಆಟಗಾರ ರೊನಾಲ್ಡೊ ಮತ್ತು ಲಿಯೊನಾಡಿಸ್ ತಲಾ 8 ಗೋಲು ಗಳಿಸಿದ್ದ ದಾಖಲೆಯನ್ನೂ ಹಿಂದಿಕ್ಕಿ ಹೊಸ ಮೈಲುಗಲ್ಲು ಸ್ಥಾಪಿಸಿದರು. ಫ್ರಾನ್ಸ್ ನ ಜಸ್ಟ್ ಫಾಂಟೀನ್ ಮತ್ತು ಬ್ರೆಜಿಲ್ ದಂತಕತೆ ಪಿಲೆ ತಲಾ 7 ಗೋಲು ಗಳಿಸಿದ್ದಾರೆ.
ಪ್ರಸ್ತುತ ವಿಶ್ವಕಪ್ ನಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ದಾಖಲೆ ಹೊಂದಿರುವ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೊನೆಲ್ ಮೆಸ್ಸಿ ನಾಕೌಟ್ ಪಂದ್ಯಗಳಲ್ಲಿ ೧೯ ಅವಕಾಶಗಳಲ್ಲಿ ಕೇವಲ 5 ಗೋಲು ಬಾರಿಸಿದ್ದಾರೆ. ಅಚ್ಚರಿ ಅಂದರೆ ಕ್ರಿಸ್ಚಿಯಾನ್ ರೊನಾಲ್ಡೊ ನಾಕೌಟ್ ಹಂತಗಳಲ್ಲಿ ಇದುವರೆಗೂ ಒಂದೂ ಗೋಲು ಬಾರಿಸಿಲ್ಲ.
ಮೆಸ್ಸಿ ಹಾಗೂ ಮೆಬೆಪೆ ತಲಾ ೬ ಗೋಲು ಬಾರಿಸಿ ವಿಶ್ವಕಪ್ ನಲ್ಲಿ ಅತೀ ಹೆಚ್ಚು ಗೋಲು ಗಳಿಸಿದ ಆಟಗಾರರ ಸಾಲಿನಲ್ಲಿದ್ದಾರೆ. ಈ ಮೂಲಕ ಗೋಲ್ಡನ್ ಬೂಟ್ ಪ್ರಶಸ್ತಿಗೆ ಇವರಿಬ್ಬರ ನಡುವೆ ಪೈಪೋಟಿ ನಡೆಯುವ ಸಾಧ್ಯತೆ ಇದೆ.



