Wednesday, August 19, 2026
Google search engine
Homeರಾಜ್ಯನಾಗೇಂದ್ರಕ್ಕೆ 2ನೇ ದಿನಕ್ಕೂ ಕಲಾಪ ಬಲಿ

ನಾಗೇಂದ್ರಕ್ಕೆ 2ನೇ ದಿನಕ್ಕೂ ಕಲಾಪ ಬಲಿ

ಬೆಂಗಳೂರು: ವಿಧಾನಸಭೆ ಹಾಗೂ ವಿಧಾನಪರಿಷತ್ ನ ಉಭಯ ಸದನಗಳ ಕಲಾಪವು ಮಂಗಳವಾರ ಕೂಡ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದ ಪ್ರತಿಪಕ್ಷಗಳು ಒಪ್ಪದ ಆಡಳಿತ ಪಕ್ಷದ ಬಿಗಿಪಟ್ಟಿಗೆ ಬಲಿಯಾಯಿತು.

ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಕಪ್ಪು ಶಾಲು ಹಾಕಿ ಪ್ರತಿಭಟನೆ ಮುಂದುವರಿಸಿ ಉಪಸಭಾಧ್ಯಕ್ಷರ ಆಯ್ಕೆಯ ಬಳಿಕ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.‌

ರೂಲ್ ಬಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮ ಹಣ ಮಾಡಿರೋದು ಅವರು. ನೇರವಾಗಿ ಅವರ ಅಕೌಂಟ್​ಗೆ ಹೋಗಿದೆ. ಮೊದಲು ಅವರ ರಾಜೀನಾಮೆ ಪಡೆಯಿರಿ.‌ ಸುಗಮ ಕಲಾಪ ನಡೆಯಲಿದೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಕೃಷ್ಣ ಬೈರೇಗೌಡ, ಸುಮ್ಮನೆ ಆರೋಪ ಮಾಡೋದು ಹಕ್ಕು ಚ್ಯುತಿ ಆಗಲಿದೆ. ಏನೇ ಚರ್ಚೆ ಮಾಡದಿದ್ದರೂ ನೋಟಿಸ್ ಕೊಟ್ಟು ಮಾಡಬೇಕು. ಬರದ ಚರ್ಚೆ ಆಗಬೇಕು. ಅದು ಬಿಟ್ಟು ದುಂಡಾವರ್ತನೆ ನಡೆಸ್ತಿದ್ದಾರೆ. ಸದಸ್ಯರ ಹಕ್ಕು ಚ್ಯುತಿ ಆಗುತ್ತಿದೆ. ಸದನ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಬಿಜೆಪಿ ಸದಸ್ಯರು ಜೋರಾಗಿ ಘೋಷಣೆ ಕೂಗಲು ಆರಂಭಿಸಿದರು. 187 ಕೋಟಿ ಹಣ ಎಲ್ಲಿಗೆ ಹೋಯ್ತು? ರಾಹುಲ್ ಗಾಂಧಿ ಮನೆಗೆ ಹೋಯ್ತು. ದಲಿತರ ಹಣ ಎಲ್ಲಿ ಹೋಯ್ತು ರಾಹುಲ್ ಗಾಂಧಿ ಮನೆಗೆ ಹೋಯ್ತು ಎಂಬ ಘೋಷಣೆ ಕೂಗಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಇವೆಲ್ಲ ಕಾನೂನು ಬಾಹಿರ ಮಾತುಗಳು. ಇದೆಲ್ಲವನ್ನು ನಿಮ್ಮ ಅಧಿಕಾರಿಗಳು ರೆಕಾರ್ಡ್ ಮಾಡ್ತಿದ್ದಾರೆ. ದಯವಿಟ್ಟು ಸೂಚನೆ ಕೊಡಿ ಎಂದು ಸ್ಪೀಕರ್​ಗೆ ಮನವಿ ಮಾಡಿದರು. ಆ ವೇಳೆ ಯಾವುದೇ ಘೋಷಣೆ ಕಡತಕ್ಕೆ ಹೋಗದಂತೆ ಸ್ಪೀಕರ್ ರೂಲಿಂಗ್ ನೀಡಿದರು. ಈ ಸಂದರ್ಭ ಆಡಳಿತ – ವಿಪಕ್ಷಗಳ ನಡುವೆ ಜಟಾಪಟಿ ತೀವ್ರವಾಯಿತು. ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಕಪ್ಪು ಶಾಲು ಗಾಳಿಯಲ್ಲಿ ಬೀಸಿ ಒತ್ತಾಯಿಸಿದರು.‌

ಆರ್.ಅಶೋಕ್ v/s ಸಚಿವ ಬಾಲಕೃಷ್ಣ:

ಈ ವೇಳೆ ಆರ್.ಅಶೋಕ್ ಹಾಗೂ ಸಚಿವ ಬಾಲಕೃಷ್ಣ ನಡುವೆ ತೀವ್ರ ವಾಕ್ಸಮರ ನಡೆಯುತು‌. ಸದನದಲ್ಲಿ ಚರ್ಚೆ ಮಾಡಿ ನಿಮಗೆ ನಿಯಮ ಗೊತ್ತಿಲ್ವಾ ಅಂತ ಸಚಿವ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆರ್.ಅಶೋಕ್, ನೀನು ಈಗ ಬಂದಿದ್ದೀಯ. ನಿನಗಿಂತ ಮೊದಲೇ ಕಲಿತಿದ್ದೇನೆ. ನಿಮಗೆ ತಾಕತ್ ಇದ್ರೆ ಬರ ಅಂತ ಘೋಷಣೆ ಮಾಡಿ. ಬರ ಘೋಷಣೆ ಮಾಡಿ ಪರಿಹಾರ ಕೊಡೋ ಯೋಗ್ಯತೆ ಇಲ್ಲ ನಿಮಗೆ ಎಂದು ವಾಗ್ದಾಳಿ ನಡೆಸಿದರು.

ಅವಕಾಶ ನೀಡಿದ ಸ್ಪೀಕರ್:

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಇಂದು ಬೆಳಗ್ಗೆ ಹೆಚ್.ಡಿ.ರೇವಣ್ಣ ಬರಗಾಲದ ಬಗ್ಗೆ ಚರ್ಚೆಗೆ ನಿಲುವಳಿ ನೋಟಿಸ್ ಮೇಲೆ ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದರು. ಗದ್ದಲದ ನಡುವೆಯೇ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡಿದ್ದನ್ನು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಯಾವ ನಿಯಮದಲ್ಲಿ ಅವಕಾಶ ಮಾಡಿಕೊಡುತ್ತೀರ ಎಂದು ಆಕ್ರೋಶ ಹೊರಹಾಕಿದರು.

ಈ ವೇಳೆ ನಿಲುವಳಿ ವಾಪಸ್ ಗೆ ಮೈತ್ರಿ ಪಕ್ಷಕ್ಕೆ ಬಿಜೆಪಿ ಸದಸ್ಯರು ಸಲಹೆ ‌ನೀಡಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ರಾಜೀನಾಮೆ ಕೊಡಿಸಿ‌, ಬರ ಪರಿಹಾರ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದರು. ಈ ವೇಳೆ, ಸದನದಲ್ಲಿ ಭಾರೀ ಗದ್ದಲ ಉಂಟಾಯಿತು. ಮುಡಾ ಹಗರಣ ಬಗ್ಗೆಯೂ ಘೋಷಣೆ ಕೂಗಿದರು.

ಮೇಲ್ಮನೆಯಲ್ಲೂ‌ ಆಗ್ರಹ :

ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕೆಂದು ವಿಧಾನಪರಿಷತ್​ ನಲ್ಲಿ ವಿರೋಧ ಪಕ್ಷಗಳು ಆಗ್ರಹಿಸಿದವು. ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ಕಳಂಕಿತ ಸಚಿವ ನಾಗೇಂದ್ರ ಅವರನ್ನ ರಾಜೀನಾಮೆ ಕೊಡಿಸುವಂತೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಸ್ತಾಪಿಸಿದರು.

ಪ್ರಶ್ನೋತ್ತರ ಕಲಾಪವಿದ್ದು ಚರ್ಚೆಗೆ ಅವಕಾಶವಿಲ್ಲ ಎಂದು ವಿರೋಧ ಪಕ್ಷಗಳ ಮನವಿಯನ್ನ ಸಭಾಪತಿ ಸಲೀಂ ಅಹಮದ್ ತಳ್ಳಿ ಹಾಕಿದರು. ಇದಕ್ಕೆ ಅಕ್ರೋಶ ವ್ಯಕ್ತಪಡಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದ ಹಗರಣ ಆರೋಪಿಯಾಗಿರುವ ಕಳಂಕಿತ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಕೊಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ವಿಪಕ್ಷ ಸದಸ್ಯರು, ಸರ್ಕಾರದ ವಿರುದ್ಧ ಪೋಸ್ಟರ್ ಹಿಡಿದು ಧಿಕ್ಕಾರ ಕೂಗಿದರು.

ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕಳಂಕಿತ ಸಚಿವ ಎಂದು ಬಳಸುವುದು ತಪ್ಪು. ನಾಗೇಂದ್ರ ಅವರ ವಿರುದ್ದ ಆರೋಪವಿದೆ. ಆದರೆ, ಇನ್ನೂ ಸಾಬೀತಾಗಿಲ್ಲ‌. ಈ ವಿಷಯವಾಗಿ ಉತ್ತರಿಸಲು ಸರ್ಕಾರ ಸಿದ್ದವಿದೆ ಎಂದರು.

ಸಭಾಪತಿಗಳು ಮನವಿ ಮಾಡಿದರೂ ವಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರೆಸಿದರು‌. ಗದ್ದಲ ಹಾಗೂ ಗೊಂದಲ ನಡುವೆಯೂ ಪ್ರಶ್ನೋತ್ತರ ಕಲಾಪ ನಡೆಯಿತು. ಪ್ರತಿಪಕ್ಷಗಳ ಪ್ರತಿಭಟನೆ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಚರ್ಚೆಗೆ ಬರುವಂತೆ ಆಗ್ರಹಿಸಿದರು.

ಸಭಾ‌ನಾಯಕ ಯತೀಂದ್ರ, ಪರಿಶಿಷ್ಟ ಪಂಗಡದ ಸಚಿವರ ಮೇಲೆ ಯಾಕಿಷ್ಟು ಕೋಪ, ಅಸಹಿಷ್ಣುತೆ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲ ಈ ಬಗ್ಗೆ ಉತ್ತರ ಕೊಡಲು ನಾವು ಸಿದ್ದರಿದ್ದೇವೆ. ನಾಗೇಂದ್ರ ವಿರುದ್ದದ ಆರೋಪ ಸಾಬೀತಾಗಿಲ್ಲ ಎಂದರು.

ಮಧ್ಯೆಪ್ರವೇಶಿಸಿದ ಸಭಾಪತಿ‌ಗಳು, ಚರ್ಚೆ ಸಂಬಂಧ‌ ಈವರೆಗೂ ನನಗೆ ಲಿಖಿತ ಪತ್ರ ನೀಡಿಲ್ಲ. ಕರ್ನಾಟಕ ವಿಧಾನಪರಿಷತ್ ಕಾರ್ಯವಿಧಾನ ಹಾಗೂ ನಡವಳಿಕೆ‌ 303ರ ವಿಧಿ ಪ್ರಕಾರ ಸದನದಲ್ಲಿ ಪೋಸ್ಟರ್, ಭಿತ್ತಿಪತ್ರ ಪ್ರದರ್ಶಿಸಬಾರದು. ನಾಳೆಯಿಂದ ಪೋಸ್ಟರ್ ಒಳಗೆ ಬಿಡದಂತೆ ಮಾರ್ಷಲ್​​ಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಆರೋಪ ಹಾಗೂ ಪ್ರತ್ಯಾರೋಪ ಹೆಚ್ಚಾಗುತ್ತಿದ್ದಂತೆ ಸದನವನ್ನ 10 ನಿಮಿಷಗಳ ಕಾಲ ಸಭಾಪತಿಗಳು ಮುಂದೂಡಿದರು ಮತ್ತೆ ಸದನ ಅರಂಭವಾದಾಗ ಇದೇ ವಿಷಯದ ಮೇಲೆ ಗಲಾಟೆ ಮುಂದುವರೆದಿದ್ದರಿಂದ ಸದನವನ್ನು ಬುಧವಾರಕ್ಕೆ ಮುಂದೂಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments