Sunday, October 4, 2026
Google search engine
Homeದೇಶಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಅ.10ರಿಂದ ಪ್ರತಿಭಟನೆ

ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಅ.10ರಿಂದ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಕ್ರೋಚ್ ಜನತಾ ಪಾರ್ಟಿ ನಾಯಕ ಅಭಿಜೀತ್ ದೀಪ್ಕೆ ಶುಕ್ರವಾರ ಘೋಷಿಸಿದ್ದಾರೆ.

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ದೀಪ್ಕೆ, ಜ್ಞಾನೇಶ್​ ಕುಮಾರ್ ತಮ್ಮ ಹುದ್ದೆಯಿಂದ ಕೆಳಗಿಳಿಯದಿದ್ದರೆ ಜಂತರ್ ಮಂತರ್ 2.0 ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದರು. ಸಿಜೆಪಿ ಇದಕ್ಕೂ ಮುನ್ನ ಶಿಕ್ಷಣ ಸಚಿವರಾಗಿದ್ದ ಧರ್ಮೆಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು. ಇದೀಗ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಅಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ, ದೇಶಾದ್ಯಂತ ಕಾಕ್ರೋಚ್​ ಪಕ್ಷದ ಕಾರ್ಯಕರ್ತರು ದೆಹಲಿಗೆ ಮೆರವಣಿಗೆ ನಡೆಸಿ ಅಕ್ಟೋಬರ್ 10 ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟಿಸುತ್ತಾರೆ ಎಂದು ತಡರಾತ್ರಿ ಎಕ್ಸ್ ಪೋಸ್ಟ್‌ ಮಾಡಿದ್ದಾರೆ.

ದೆಹಲಿ ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದರೆ, ಪ್ರತಿಭಟನಾಕಾರರನ್ನು ಎಲ್ಲಿ ತಡೆಯಲಾಗುತ್ತದೆಯೋ ಅದೇ ನಮ್ಮ ಜಂತರ್ ಮಂತರ್ ಆಗುತ್ತದೆ ಎಂದು ಎಚ್ಚರಿಸಿದ್ದು, ಈ ಬಾರಿ ಕ್ರಿಮಿನಲ್ ಗಳು ಪ್ರತಿಭಟನೆಯಲ್ಲಿ ನುಸುಳಿದರೆ ಅದಕ್ಕೆ ನಾವು ಹೊಣೆ ಅಲ್ಲ ಎಂದು ದೀಪ್ಕೆ ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆಯು ಶಾಂತಿಯುತವಾಗಿರುತ್ತದೆ ಎಂದು ಹೇಳಿದ ಅವರು, ನಾವು ಮಹಾತ್ಮ ಗಾಂಧಿಯವರು ತೋರಿಸಿದ ಹಾದಿಯಲ್ಲಿ ನಡೆಯುತ್ತೇವೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಗೌರವಿಸಬೇಕೇ ಅಥವಾ ಜುಲೈ 20 ರಂದು ನಾವು ಕಂಡ ದೌರ್ಜನ್ಯವನ್ನು ಪುನರಾವರ್ತಿಸಬೇಕೇ ಎಂಬುದನ್ನು ನಿರ್ಧರಿಸುವುದು ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಬಿಟ್ಟ ವಿಷಯ ಎಂದು ಹೇಳಿದ್ದಾರೆ.

ಇದು ಭಾರತೀಯ ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವಾಗಿದೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ಬಯಸುವ ಪ್ರತಿಯೊಬ್ಬ ನಾಗರಿಕರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ದೀಪ್ಕೆ ಕರೆ ನೀಡಿದ್ದಾರೆ.

ದೆಹಲಿ ಮತ್ತು ಮುಂಬೈನಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಶುಕ್ರವಾರ ಪ್ರತಿಭಟನೆಗಳು ನಡೆದಿದ್ದವು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಮತದಾರರ ಹೆಸರುಗಳ ನಿರ್ವಹಣೆಯಲ್ಲಿ ಅಕ್ರಮ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ, ಮುಂಬೈನಲ್ಲಿ ಪೊಲೀಸರು ಭಾರಿ ಬಿಗಿ ಭದ್ರತೆ ತೆಗೆದುಕೊಂಡಿದ್ದರು.

ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು, ಕ್ರಿಮಿನಲ್ ವಿಚಾರಣೆಯನ್ನು ಎದುರಿಸಬೇಕು ಮತ್ತು ಅವರಿಗೆ ಯಾರು ಆದೇಶ ನೀಡಿದ್ದರು ಎಂಬುದನ್ನು ಬಹಿರಂಗಪಡಿಸಬೇಕು. SIR (ವಿಶೇಷ ಪರಿಷ್ಕರಣಾ ಪ್ರಕ್ರಿಯೆ) ಅನ್ನು ತಡೆಹಿಡಿಯಬೇಕು, 2025ರ ಜನವರಿಯ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಬೇಕು ಮತ್ತು ಸ್ವತಂತ್ರ ತನಿಖೆಗೆ ಆದೇಶಿಸಬೇಕು. ಮತ್ತು 2023ರ ನೇಮಕಾತಿ ಕಾನೂನನ್ನು ರದ್ದುಗೊಳಿಸಬೇಕು ಮತ್ತು ನಾಗರಿಕ ಸಮಾಜದ ಭಾಗವಹಿಸುವಿಕೆಯೊಂದಿಗೆ ಪಾರದರ್ಶಕ ಕಾನೂನನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ನಿನ್ನೆ ಸಿಜೆಪಿ ಪ್ರತಿಭಟನೆ ನಡೆಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments