Wednesday, August 19, 2026
Google search engine
Homeಅಪರಾಧತಂದೆ- ಮಗು ಸಾವು ಪ್ರಕರಣಕ್ಕೆ ಟ್ವಿಸ್ಟ್: ಲವ್ವರ್ ಜೊತೆ ಸೇರಿ ಪತ್ನಿಯಿಂದಲೇ ಕೊಲೆ!

ತಂದೆ- ಮಗು ಸಾವು ಪ್ರಕರಣಕ್ಕೆ ಟ್ವಿಸ್ಟ್: ಲವ್ವರ್ ಜೊತೆ ಸೇರಿ ಪತ್ನಿಯಿಂದಲೇ ಕೊಲೆ!

ಬೆಂಗಳೂರು:ಚಿಕ್ಕಬಾಣವಾರದ ಗುಡ್ಡೆ ಬಸವಪುರದಲ್ಲಿ ಮಗುವಿನ ಜೊತೆ ತಂದೆ ಜೋಡಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.

ಪ್ರಕರಣದ ತನಿಖೆ ವೇಳೆ ಮೃತ ಅಭಿನಂದನ್ ಅವರ ಪತ್ನಿ ಹರಿಣಿ ಚಿಕ್ಕಬಾಣಾವರ ಪೊಲೀಸರ ಮುಂದೆ ಪ್ರಿಯಕರ ವಿನಯ್ ಜೊತೆ ಸೇರಿ ಪತಿ ಹಾಗೂ ಮಗನನ್ನು ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾಳೆ.

ಕೊಲೆಯಾದ ಅಭಿನಂದನ್ ಪತ್ನಿ  ಹರಿಣಿ ಹಾಗೂ ಆಕೆಯ ಪ್ರಿಯಕರ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯ ವಿನಯ್ (30) ನನ್ನು ಚಿಕ್ಕಬಾಣವಾರ ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ಮಧ್ಯರಾತ್ರಿ ಪತಿ ಹಾಗೂ ಮಗನನ್ನೇ ಬರ್ಬರವಾಗಿ ಕೊಂದು ಬೆಡ್‌ರೂಮ್‌ನಲ್ಲಿ ಮಲಗಿದ್ದ ಹರಿಣಿ ನಾಟಕ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಪತಿಗೆ ಚಟ್ಟ ಕಟ್ಟಿದ ಪತ್ನಿ ನಂತರ ತಾನೂ ಹೆತ್ತ ಮಗು ಎನ್ನದೇ ರಾಕ್ಷಸಿಯಾಗಿ ಮಗುವನ್ನು ಕೊಂದು ಇದೀಗ ಪ್ರಿಯಕರನೊಂದಿಗೆ ಜೈಲು ಪಾಲಾಗಿದ್ದಾಳೆ.

ಖಾಸಗಿ ಕಂಪನಿಯೊಂದರ ಉದ್ಯೋಗಿ ವಿನಯ್‌ಗೆ ಇನ್‌ಸ್ಟಾ ಗ್ರಾಂನಲ್ಲಿ ಹರಿಣಿಯ ಪರಿಚಯವಾಗಿ ಅದು ಸ್ನೇಹ ಪ್ರೀತಿಗೆ ತಿರುಗಿದೆ.ನಂತರದಲ್ಲಿ ವಿನಯ್ ಆಗಾಗ್ಗೆ ಹರಿಣಿ ಮನೆಗೆ ಬಂದು ಹೋಗುತ್ತಿದ್ದನು. ಈ ವಿಚಾರ ಪತಿ ಅಭಿನಂದನ್ ಗೆ ಗೊತ್ತಾಗಿ ಜಗಳವಾಗುತ್ತಿತ್ತು. ಇದರಿಂದ ಹರಿಣಿ ಪತಿ ಮೇಲೆ ಕೋಪಗೊಂಡಿದ್ದಳು.

ಇದೇ ವಿಚಾರಕ್ಕೆ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿದ್ದುದ್ದರಿಂದ ಪ್ರೀತಿಗೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾಳೆ. ಈ ವಿಚಾರವನ್ನು ಪ್ರಿಯಕರನಿಗೂ ತಿಳಿಸಿ ಇಬ್ಬರು ಕೊಲೆಗೆ ಸಂಚು ರೂಪಿಸಿದ್ದಾರೆ.

ಮೊದಲೇ ಮಾಡಿಕೊಂಡ ಸಂಚಿನಂತೆ ಭಾನುವಾರ ರಾತ್ರಿ ಗಂಡ ಅಭಿನಂದನ್ ನಿದ್ರೆಗೆ ಜಾರಿದ ನಂತರ ಮನೆಯಲ್ಲಿದ್ದ ಸಿಸಿ ಕ್ಯಾಮೆರಾವನ್ನು ಸ್ಥಗಿತಗೊಳಿಸಿ 11 ಗಂಟೆ ಸುಮಾರಿನಲ್ಲಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ.

ಪ್ರಿಯಕರ ವಿನಯ್ ಮನೆಗೆ ಬಂದಿದ್ದಾನೆ. ಮಲಗಿದ್ದ ಪತಿ ಅಭಿನಂದನ್‌ ಕಾಲನ್ನು ಹರಿಣಿ ಗಟ್ಟಿಯಾಗಿ ಹಿಡಿದುಕೊಂಡಿದ್ದು, ವಿನಯ್ ಸೌಟಿನಿಂದ ತಲೆಗೆ ಹೊಡೆದು ನಂತರ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಗಲಾಟೆ ಕೇಳಿ ಎಚ್ಚರಗೊಂಡು ಕೊಠಡಿ ಬಳಿ ಬಂದು ನಿಂತು ನೋಡುತ್ತಿದ್ದ ತನ್ನ 4 ವರ್ಷದ ಮಗು ಯದುವೀರ್‌ನನ್ನು ಕಂಡು ಹರಿಣಿ ಗಾಬರಿಗೊಂಡು ಕೃತ್ಯವನ್ನು ಆತ ಯಾರಿಗಾದರೂ ಹೇಳಿದರೆ ಎಂದು ಭಾವಿಸಿ ಹೆದರಿ ಇಬ್ಬರೂ ಸೇರಿ ಮಗುವನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ.

ನಂತರ ಪ್ರಿಯಕರ ಮನೆಯಿಂದ ಪರಾರಿಯಾದರೆ,ಹರಿಣಿ ರಕ್ತದ ಕಲೆಗಳಿದ್ದ ಪತಿ ಬಟ್ಟೆಯನ್ನು ಬದಲಾಯಿಸಿ ರಾತ್ರಿಯೇ ತೊಳೆದಿದ್ದಾಳೆ.ನಂತರ ಮಗುವನ್ನು ಗಂಡನ ಮೇಲೆ ಮಲಗಿಸಿ ಆಕೆಯೂ ನಿದ್ರೆ ಮಾಡುವಂತೆ ನಟಿಸಿದ್ದಾಳೆ. ಬೆಳಗಾಗುತ್ತಿದ್ದಂತೆ ಗಂಡ ಮಗು ಸಾವನ್ನಪ್ಪಿದ್ದಾರೆಂದು ಬಿಂಬಿಸಿ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮನೆಯ ವಾತಾವರಣ ಗಮನಿಸಿ ಆಕೆಯ ಮೇಲೆಯೇ ಸಂಶಯ ಮೂಡಿದೆ. ಮನೆಯಲ್ಲಿದ್ದ ಸಿಸಿ ಕ್ಯಾಮೆರಾವನ್ನು ಏಕೆ ಆಫ್ ಮಾಡಲಾಗಿದೆ ಎಂದು ಪ್ರಶ್ನಿಸಿದಾಗ ಆಕೆ ಸರಿಯಾದ ಉತ್ತರ ನೀಡಿಲ್ಲ.ಮಗುವನ್ನು ಪತಿ ಹಿಡಿದುಕೊಂಡು ಮಲಗಿದ್ದಾಗ ಉಸಿರುಗಟ್ಟಿ ಸತ್ತಿದೆ ಎಂದು ಹೇಳಿದ್ದಾಳೆ. ಆದರೆ ಆಕೆಯ ಮೇಲೆಯೇ ಪೊಲೀಸರಿಗೆ ಗಾಢ ಅನುಮಾನ ವ್ಯಕ್ತವಾಗಿದೆ.

ಇತ್ತ ಮಗ ಅಭಿನಂದನ್ ಹಾಗೂ ಮೊಮಗ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಭಿನಂದನ್ ತಾಯಿ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರು ಮನೆಯನ್ನೆಲ್ಲಾ ಪರಿಶೀಲಿಸಿ ನಂತರ ಹರಿಣಿಯನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಗಿ, ಆ ವೇಳೆ ಮಗ ನೋಡಿದ್ದರಿಂದ ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದನ್ನು ಬಾಯ್ದಿಟ್ಟಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments