ಬೆಂಗಳೂರು: ಮಗನಿಂದ ಸೊಸೆಯನ್ನು ದೂರ ಮಾಡಲು ಅತ್ತೆ ಮನೆಯವರು ಸೊಸೆಯನ್ನೇ ಕಿಡ್ನಾಪ್ ಮಾಡಿಸಿ ಸಂಬಂಧಿಕನ ಜೊತೆ ಮತ್ತೊಂದು ಮದುವೆ ಮಾಡಿಸಲು ಯತ್ನಿಸಿದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೈದರಾಬಾದ್‌ಗೆ ಕರೆದೊಯ್ದು ಸಂಬಂಧಿ ಯುವಕನೊಂದಿಗೆ ವಿವಾಹ ಮಾಡಿಸಿ ದುರುದ್ದೇಶದಿಂದ ಸಿನಿಮೀಯ ರೀತಿಯಲ್ಲಿ ವಿವಾಹಿತ ಯುವತಿಯನ್ನು ಅಪಹರಿಸಲು ಯತ್ನಿಸಿರುವುದು ಮಾಗಡಿ ರಸ್ತೆ ಠಾಣೆ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ರಾಜಸ್ಥಾನ ಮೂಲದ ಪೂಜಾ (21) ತನ್ನ ಜಾತಿಯವರೇ ಆದ ಓಂಪ್ರಕಾಶ್ ನನ್ನು ಪ್ರೀತಿಸಿದ್ದರು. ಆದರೆ ಆತನದು ಬೇರೆ ಉಪಜಾತಿಯಾಗಿದ್ದರಿಂದ ಪೋಷಕರು ಇವರ ಮದುವೆಗೆ ಒಪ್ಪಿರಲಿಲ್ಲ.
ಪೋಷಕರ ವಿರೋಧದ ನಡುವೆಯೂ ಏಳು ತಿಂಗಳ ಹಿಂದೆ ಮದುವೆಯಾಗಿದ್ದ ಪೂಜಾ, ನಂತರ ರಾಜಸ್ಥಾನ ತೊರೆದು ಬೆಂಗಳೂರಿಗೆ ಬಂದಿದ್ದರು. ದಾಸರಹಳ್ಳಿಯ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಪೂಜಾಳ ಪ್ರೇಮ ವಿವಾಹವನ್ನು ಕುಟುಂಬಸ್ಥರು ಹಾಗೂ ಸಂಬಂಧಿಕರು ಒಪ್ಪಿರಲಿಲ್ಲ. ಹೇಗಾದರೂ ಮಾಡಿ ಅವರಿಬ್ಬರನ್ನು ದೂರಮಾಡಿ ಮಗಳನ್ನು ವಾಪಸ್ ರಾಜಸ್ಥಾನಕ್ಕೆ ಕರೆದೊಯ್ಯಬೇಕೆಂದು ಕುಟುಂಬಸ್ಥರು ಯೋಚಿಸಿದ್ದರು.
ನಂತರ ಸಂಬಂಧಿ ಕನ್ನಯ್ಯಲಾಲ್ ಜೊತೆ ಹೈದರಾಬಾದ್‌ನಲ್ಲಿ ಪೂಜಾಳಿಗೆ ಮದುವೆ ಮಾಡಿಸುವ ಯೋಚನೆ ಮಾಡಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿ ಪೂಜಾ ವಾಸವಿರುವ ಸ್ಥಳವನ್ನು ಪತ್ತೆಹಚ್ಚಿ ಆಕೆಯನ್ನು ಕರೆದೊಯ್ಯಲು ಕನ್ನಯ್ಯಲಾಲ್ ಮಾಸ್ಟರ್ ಪ್ಲಾನ್ ಮಾಡಿದ್ದಾನೆ.
ಅದರಂತೆ ನಾಲ್ವರಿಗೆ ಸುಪಾರಿ ನೀಡಿ ರಾಜಸ್ಥಾನದಿಂದ ಬೆಂಗಳೂರಿಗೆ ಕಳುಹಿಸಿದ್ದನು. ಅವರೆಲ್ಲರೂ ಕಾರಿನಲ್ಲಿ ನಗರಕ್ಕೆ ಬಂದು ಲಾಡ್ಜ್ ವೊಂದರಲ್ಲಿ ಉಳಿದುಕೊಂಡು ಪೂಜಾ ವಾಸವಿದ್ದ ಸ್ಥಳವನ್ನು ಹುಡುಕಿದ್ದಾರೆ. ಒಂದು ವಾರದ ಹಿಂದೆ ಪೂಜಾ ವಾಸವಾಗಿದ್ದ ದಾಸರಹಳ್ಳಿ ಮನೆಗೆ ನುಗ್ಗಿದ ನಾಲ್ವರು, ಆಕೆಯನ್ನು ಬಲವಂತವಾಗಿ ಮನೆಯಿಂದ ಹೊರಗೆ ಕರೆತಂದು ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದರು.
ಸಹಾಯಕ್ಕಾಗಿ ಆಕೆ ಕೂಗಿಕೊಂಡಾಗ ಸ್ಥಳೀಯರು ಕಾರನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ. ಈ ವೇಳೆ ಚಾಲಕ ಸದ್ಧಾಂ ಎಂಬಾತ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗಿದ್ದು, ರಸ್ತೆಯುದ್ದಕ್ಕೂ ಸರಣಿ ಅಪಘಾತ ಸಂಭವಿಸಿದೆ. ಹಲವು ವಾಹನಗಳು ಜಖಂಗೊಂಡಿದ್ದಲ್ಲದೆ, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6ಮಂದಿ ಗಾಯಗೊಂಡಿದ್ದರು.
ಕೊನೆಗೆ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಕಾರನ್ನು ಅಡ್ಡಗಟ್ಟಿ ಯುವತಿಯನ್ನು ರಕ್ಷಿಸಿದ್ದಾರೆ. ಈ ವೇಳೆ ಕಾರು ಚಾಲಕ ಸದ್ದಾಂ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಜಯಲಕ್ಷ್ಮೀ (57) ಎಂಬ ಮಹಿಳೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಗಡಿ ರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ರಾಜಸ್ಥಾನ ಮೂಲದ ಕಿರಣ್ ಆಯನ್ ಹಾಗೂ ರಾಜೇಶ್‌ನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದರು. ತನಿಖೆಯಲ್ಲಿ ಇನ್ನಷ್ಟು ಮಾಹಿತಿಗಳು ಬಹಿರಂಗವಾಗಿವೆ.
ಇದರನ್ವಯ ಪೂಜಾಳ ಚಿಕ್ಕಪ್ಪ ಅಂದಾರಾವ್, ಹೈದರಾಬಾದ್‌ನಲ್ಲಿ ನೆಲೆಸಿದ್ದ ಸಂಬಂಧಿ ಕನ್ನಯ್ಯಲಾಲ್ ಹಾಗೂ ಸೋದರತ್ತೆ ಪ್ರಾಣಿದೇವಿಯನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಅಂದಿನಿಂದ ತಲೆಮರೆಸಿಕೊಂಡಿರುವ ಕಾರು ಚಾಲಕ ಸದ್ದಾಂ ಇದುವರೆಗೂ ಪತ್ತೆಯಾಗಿಲ್ಲ. ಆತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.



