ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ಪಶುವೈದ್ಯಾಧಿಕಾರಿಗಳ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳು ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಐಎಎಸ್ ಅಧಿಕಾರಿಗಳ ವಿಶೇಷ ತನಿಖಾ ದಳ(ಎಸ್‌ಐಟಿ) ರಚನೆ ಮಾಡಿ ತನಿಖೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಐಪಿಎಸ್ ಅಧಿಕಾರಿಗಳಾದ ದಿವ್ಯಾ ಗೋಪಿನಾಥ್, ಅನೂಪ್ ಶೆಟ್ಟಿ, ಕುಶಾಲ್ ಚೌಕ್ಸೆ, ಶ್ರಮ್ಮಾ ಮಿಶ್ರಾ ಅವರಿರುವ ತಂಡ ರಚನೆ ಮಾಡಬೇಕು. ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ನಡೆಸುತ್ತಿರುವ ತನಿಖೆಗೆ ಈ ತಂಡ ಅಗತ್ಯ ಸಹಕಾರ ನೀಡಬೇಕು. ಅಲ್ಲದೇ, ಎಸ್ಐಟಿ ತನಿಖೆಯನ್ನು 100 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಪೀಠವು ಹೇಳಿದೆ.
30 ದಿನಗಳಿಗೊಮ್ಮೆ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಬೇಕು. ಸಿಐಡಿ ಪೊಲೀಸರು ಎಸ್ಐಟಿ ತನಿಖೆಗೆ ಅಗತ್ಯವಿರುವ ಸಂಪೂರ್ಣ ದಾಖಲೆಗಳನ್ನು ನೀಡಬೇಕು. ರಾಜ್ಯ ಸರ್ಕಾರ ಎಸ್ಐಟಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಬೇಕು. ಈ ಸಂಬಂಧ ಶೀಘ್ರ ಅಧಿಸೂಚನೆ ಹೊರಡಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.
ಮುಂದಿನ 100 ದಿನಗಳಲ್ಲಿ ರಚಿಸಿದ ವಿಶೇಷ ತನಿಖಾ ತಂಡವು ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. 30 ದಿನಗಳಿಗೆ ಒಮ್ಮೆ ತನಿಖಾ ವರದಿಯ ವಿವರಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ಒಟ್ಟು 17 ನಿರ್ದೇಶಗಳನ್ನು ನೀಡಿ ಹೈಕೋರ್ಟ್ ಆದೇಶಿಸಿದೆ.
ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅಕ್ರಮವಾಗಿ ನೇಮಕವಾಗಲು ಸಳ್ಳು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡಿದ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ವಿರುದ್ಧ ಮತ್ತು ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಭ್ಯರ್ಥಿಗಳ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು(ಎಫ್ಐಆರ್) ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಚನ್ನರಾಯಪಟ್ಟಣದ ಪಶುವೈದ್ಯ ಡಾ.ಮಂಜುನಾಥ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಅರ್ಜಿಗಳ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ನ್ಯಾಯಪೀಠ ಈ ಆದೇಶ ನೀಡಿದ್ದು, ವಿಚಾರಣೆಯನ್ನು 2027ರ ಜನವರಿ ತಿಂಗಳಿಗೆ ಮುಂದೂಡಿದೆ.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಶಾಸಕ ಯತ್ನಾಳ್ ಪರ ವಕೀಲರು, ಕೆಪಿಎಸ್ಸಿ ಅಧ್ಯಕ್ಷರ ಸಂಬಂಧಿಯೊಬ್ಬರಿಗೆ ಒಎಂಆರ್ ಶೀಟ್ಗಳನ್ನು ತಿರುಚಲು ಅವಕಾಶ ಕಲ್ಪಿಸಲಾಗಿತ್ತು. ಕೆಲ ಅಭ್ಯರ್ಥಿಗಳನ್ನು ಹೊರ ರಾಜ್ಯಕ್ಕೆ ಕರೆದೊಯ್ದು, ಪ್ರಶ್ನೆ ಹಾಗೂ ಉತ್ತರಗಳನ್ನು ನೀಡಿ ತರಬೇತಿ ನೀಡಿ ವಾಪಸ್ ಕರೆತಂದಿದ್ದಾರೆ. ಪಶುವೈದ್ಯಾಧಿಕಾರಿ ಹುದ್ದೆ ನೇಮಕವಾಗಬೇಕಾದರೆ 80 ಲಕ್ಷ ರೂ. ಹಣ ನೀಡಬೇಕು. ಅದರಲ್ಲಿ 40 ಲಕ್ಷ ಹಣವನ್ನು ರಾಜ್ಯದಿಂದ ಹೊರಗೆ ಕರೆದುಕೊಂಡು ಹೋಗುವಾಗ ಕೊಡಬೇಕು. ನಂತರ ಅಭ್ಯರ್ಥಿಯ ಮೂಲ ಅಂಕಪಟ್ಟಿ ಸಂಗ್ರಹಿಸುತ್ತಾರೆ ಎಂದು ಅಕ್ರಮ ನಡೆದಿರುವ ವಿಧಾನದ ಕುರಿತು ನ್ಯಾಯಪೀಠಕ್ಕೆ ವಿವರಿಸಿದರು.
ಸರ್ಕಾರದ ಪರ ವಕೀಲರು, ಸಿಐಡಿ ತನಿಖೆಯನ್ನು ನ್ಯಾಯಾಲಯವು ತಡೆಹಿಡಿಯುವುದು ಸರಿಯಲ್ಲ. ಈಗಾಗಲೇ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ತನಿಖೆ ಮುಂದುವರಿಯಲಿ. ಜು.25 ರಂದು ಎಫ್ಐಆರ್ ದಾಖಲಾಗಿದೆ. ಕೇವಲ ಮೂರು ದಿನಗಳಾಗಿದೆಯಷ್ಟೇ. ಅಷ್ಟರಾಗಲೇ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.



