Wednesday, August 19, 2026
Google search engine
HomeUncategorizedಶಿಕ್ಷಕರ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ

ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು:ರಾಜ್ಯದ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೃಹತ್ 15 ಸಾವಿರ ಮಂದಿ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮಂಗಳವಾರದಿಂದ ಆರಂಭವಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 7ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸೆ. 10ರವರೆಗೆ ಶುಲ್ಕ ಪಾವತಿಸಬಹುದಾಗಿದೆ. ಇದರಲ್ಲಿ ಕಂಪ್ಯೂಟರ್ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಪ್ರಾಥಮಿಕ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರು (ಅಸಿಸ್ಟೆಂಟ್ ಮಾಸ್ಟರ್ಸ್) ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಸೇರಿವೆ.

ಅಭ್ಯರ್ಥಿಗಳು ಒಂದೇ ಅರ್ಜಿಯ ಮೂಲಕ ಎಲ್ಲಾ ವೃಂದದ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ತಾವು ಯಾವ ಹುದ್ದೆಗೆ ಮೊದಲ ಆದ್ಯತೆ ನೀಡ ಬಯಸುತ್ತಾರೋ ಆ ‘ತಾತ್ಕಾಲಿಕ ಆದ್ಯತೆ’ ಮತ್ತು ಪರೀಕ್ಷೆ ಬರೆಯುವ ‘ಜಿಲ್ಲೆಯ ಆದ್ಯತೆ’ಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಆನ್‌ಲೈನ್ ಅರ್ಜಿಯಲ್ಲಿ ತಪ್ಪು ಅಥವಾ ದೋಷಪೂರಿತ ಮಾಹಿತಿ ನೀಡಿದ್ದಲ್ಲಿ ಅರ್ಜಿ ತಿರಸ್ಕರಿಸಲ್ಪಡಲಿದ್ದು, ಅದಕ್ಕೆ ಅಭ್ಯರ್ಥಿಗಳೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ.

ಪ್ರಿಂಟ್‌ಔಟ್ ಪ್ರಾಮುಖ್ಯತೆ:

ಆನ್‌ಲೈನ್‌ನಲ್ಲಿ ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿ ಬಯಸಿದರೆ, ಹಳೆಯ ಅರ್ಜಿಯನ್ನು ತಿದ್ದುಪಡಿ ಮಾಡಲು ಬರುವುದಿಲ್ಲ. ಬದಲಾಗಿ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಿ ಮತ್ತೊಮ್ಮೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ, ಆನ್‌ಲೈನ್ ಅರ್ಜಿ ಸಲ್ಲಿಸುವ ಅಂತಿಮ ಹಂತದಲ್ಲಿ ಮಾಹಿತಿಯನ್ನು ಪ್ರಿಂಟ್ ತೆಗೆದುಕೊಂಡು, ಸರಿಯಾಗಿದೆಯೇ ಎಂದು ಖಾತ್ರಿಪಡಿಸಿಕೊಂಡು ಸಬ್ಮಿಟ್ ಮಾಡಲು ಸೂಚಿಸಲಾಗಿದೆ. ಜೊತೆಗೆ ಸ್ವಂತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ನೀಡುವುದು ಕಡ್ಡಾಯವಾಗಿದೆ.

ಗೊಂದಲ ಮತ್ತು ಆಕ್ಷೇಪ:

ಶಾಲೆ ಶಿಕ್ಷಣ ಇಲಾಖೆಯು ವಿವಾಹಿತ ಮಹಿಳಾ ಅಭ್ಯರ್ಥಿಗಳ ಆದಾಯ ಪ್ರಮಾಣಪತ್ರದ ವಿಷಯದಲ್ಲಿ ಇಬ್ಬಂದಿ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅರ್ಜಿಯಲ್ಲಿ ತಂದೆ ಅಥವಾ ಪತಿಯ ಆದಾಯ ಪ್ರಮಾಣಪತ್ರ ಸ್ವೀಕರಿಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ ಕೆಇಎ ಸೇರಿದಂತೆ ಇತರ ಪರೀಕ್ಷಾ ಪ್ರಾಧಿಕಾರಗಳು ಕಡ್ಡಾಯವಾಗಿ ‘ಪತಿಯ ಆದಾಯ ಪ್ರಮಾಣಪತ್ರ’ವನ್ನೇ ಸಲ್ಲಿಸಬೇಕೆಂದು ಸೂಚಿಸುವುದರಿಂದ, ಶಿಕ್ಷಣ ಇಲಾಖೆಯ ಈ ದ್ವಂದ್ವ ನೀತಿಯು ಅಭ್ಯರ್ಥಿಗಳಲ್ಲಿ ಗೊಂದಲ ಮತ್ತು ಅನುಮಾನವನ್ನು ಮೂಡಿಸಿದೆ.

ಸಹಾಯವಾಣಿ ವಿವರ:

ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲಗಳು ಅಥವಾ ಅನುಮಾನಗಳಿದ್ದಲ್ಲಿ ಅಭ್ಯರ್ಥಿಗಳು ಕೇಂದ್ರೀಕೃತ ದಾಖಲಾತಿ ಘಟಕದ ಸಹಾಯವಾಣಿ ಸಂಖ್ಯೆಗಳಾದ 080-22483145, 22483140 ಅಥವಾ 9483024723 ಅನ್ನು ಸಂಪರ್ಕಿಸಬಹುದು. ನೇರ ಅರ್ಜಿ ಸಲ್ಲಿಕೆಗಾಗಿ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ schooleducation.karnataka.gov.in/cacell/kn ಗೆ ಭೇಟಿ ನೀಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments