ಹಾಸನದಲ್ಲಿ ನಡೆಯುವ ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಇದಕ್ಕಾಗಿ ಪೂರ್ವ ಸಿದ್ಧತಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಇದಕ್ಕಾಗಿ ಅರಸೀಕೆರೆ ರಸ್ತೆಯ ಎಸ್.ಎಂ.ಕೃಷ್ಣ ನಗರ ಬಡಾವಣೆಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸುಮಾರು 840 ಅಡಿ ಅಗಲ, 600 ಅಡಿ ಉದ್ದದ ಪ್ರದೇಶದಲ್ಲಿ ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ.
ಏಕ ಕಾಲಕ್ಕೆ ಸುಮಾರು ೭೦ ಸಾವಿರ ಜನರು ಕೂರಲು ಬೇಕಾದ ಆಸನ ವ್ಯವಸ್ಥೆ ಮಾಡಲಾಗಿದ್ದು, ಸಮಾವೇಶಕ್ಕಾಗಿ ಮೂರು ವೇದಿಕೆ ನಿರ್ಮಿಸಲಾಗಿದೆ.
ಬೆಳಗ್ಗೆ 11 ಗಂಟೆಗೆ ನಿಗದಿಯಾಗಿರುವ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಸಂಪುಟದ ಬಹುತೇಕ ಸಚಿವರು ಹಾಗೂ ಕೇಂದ್ರ ಮತ್ತು ರಾಜ್ಯ ನಾಯಕರು ಭಾಗಿಯಾಗಲಿದ್ದಾರೆ. ಇವರಿಗಾಗಿ ಪ್ರಧಾನ
ವೇದಿಕೆ ಸಜ್ಜುಗೊಳಿಸಲಾಗಿದ್ದರೆ,
ವೇದಿಕೆಯ ಎಡ ಹಾಗೂ ಬಲ ಬದಿಯಲ್ಲಿ ಎರಡು ಪರ್ಯಾಯ ವೇದಿಕೆ ಸಿದ್ಧ ಮಾಡಲಾಗಿದೆ. ಇಲ್ಲಿ ಶಾಸಕರು, ಮಾಜಿ ಸಚಿವರು ಹಾಗೂ ವಿವಿಧ ಸಂಘಟನೆಗಳ ನಾಯಕರು, ಮುಖಂಡರು ಆಸೀನರಾಗಲಿದ್ದಾರೆ. ಕೆಪಿಸಿಸಿ ಹಾಗೂ ಹಿಂದುಳಿದ, ಶೋಷಿತ ಹಾಗೂ ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಜನ ಕಲ್ಯಾಣ ಸಮಾವೇಶ ನಡೆಯುತ್ತಿದೆ.
ತಮ್ಮ ನೆಚ್ಚಿನ ನಾಯಕರು ಹಾಗೂ ಸಚಿವರನ್ನು ಸ್ವಾಗತಿಸಲು ಅರಸೀಕೆರೆ ರಸ್ತೆಯ ತುಂಬೆಲ್ಲಾ ನೂರಾರು ಸಂಖ್ಯೆಯ, ಕಾಂಗ್ರೆಸ್ ಪಕ್ಷದ ಬಾವುಟ, ತರೇಹೇವಾರಿ ಬಣ್ಣದ ಬೃಹತ್ ಫ್ಲೆಕ್ಸ್, ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿವೆ. ಸಮಾವೇಶ ನಡೆಯುವ ಸ್ಥಳ ರಸ್ತೆ ಉದ್ದಕ್ಕೂ ಕೈ ನಾಯಕರು-ಸಚಿವ ಫ್ಲೆಕ್ಸ್ ಕಣ್ಣಿಗೆ ರಾಚುತ್ತಿವೆ.
ಅಂದಾಜಿನ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಇತರರು ಕಳೆದ ಹಲವು ದಿನಗಳಿಂದ ಸಿದ್ಧತೆಗಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ. ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ.
2 ಸಾವಿರ ಪೊಲೀಸರ ನಿಯೋಜನೆ
ಎರಡು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬರೋಬ್ಬರಿ ಐವರು ಎಸ್ಪಿ, ೬ ಮಂದಿ ಎಎಸ್ಪಿ, ೧೨ ಡಿವೈಎಸ್ಪಿ, ೩೦ ಕ್ಕೂ ಹೆಚ್ಚು ಇನ್ಸ್ಪೆಕ್ಟರ್ ಹಾಗೂ ೮೦ಕ್ಕೂ ಹೆಚ್ಚು ಪಿಎಸ್‌ಐಗಳನ್ನು ನಿಯೋಜನೆ ಮಾಡಲಾಗಿದ್ದು, ಇವರೊಂದಿಗೆ ಸುಮಾರು ೨೦೦೦ ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನೂ ಭದ್ರತೆಗೆ ಹಾಕಲಾಗಿದೆ.
ವಾಹನಗಳ ಸಂಚಾರಕ್ಕೆ ನಿರ್ಬಂಧ
ಕಾರ್ಯಕ್ರಮಕ್ಕೆ ಸುಮಾರು 2 ಲಕ್ಷ ಜನಸೇರುವ ನಿರೀಕ್ಷೆ ಇದ್ದು ಸಾರ್ವಜನಿಕರ ಮತ್ತು ವಾಹನ ಸಂಚಾರರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಡಿ.೫ ರಂದು ಬೆಳಗ್ಗೆ ೬ ಗಂಟೆಯಿಂದ ಮಧ್ಯರಾತ್ರಿ ೧೨ ಗಂಟೆಯವರೆಗೆ ಸರ್ಕಾರಿ ವಾಹನ ಮತ್ತು ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು (ತುರ್ತುಪರಿಸ್ಥಿತಿ ವಾಹನ ಹಾಗೂ ಸರ್ಕಾರಿ ವಾಹನಗಳನ್ನು ಹೊರತುಪಡಿಸಿ) ಹಾಸನ ತಾಲ್ಲೂಕು ಅರಸೀಕೆರೆ ರಸ್ತೆಯ ಎಡಬದಿಯನ್ನು ಡೈರಿ ಸರ್ಕಲ್‌ನಿಂದ ದೊಡ್ಡಪುರ ಸರ್ಕಲ್‌ವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಧಿಕಾರಿ ಸಿ ಸತ್ಯಭಾಮ ಅವರು ಆದೇಶಿಸಿದ್ದಾರೆ.
ಎಲ್ಲಾ ಬಗೆಯ ವಾಹನಗಳು ಹಾಸನ ತಾಲ್ಲೂಕು ಅರಸೀಕೆರೆ ರಸ್ತೆಯ ಬಲಬದಿಯನ್ನು ಡೈರಿ ಸರ್ಕಲ್‌ನಿಂದ ದೊಡ್ಡಪುರ ಸರ್ಕಲ್‌ವರೆಗೆ ದ್ವಿಮುಖವಾಗಿ ಸಂಚಾರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.