ಬೆಳಗಾವಿ ಸುವರ್ಣಸೌಧ: ‘ಧಿಕ್ಕಾರ ಧಿಕ್ಕಾರ, ಕೇಂದ್ರ ಬಿಜೆಪಿ ಸರಕಾರಕ್ಕೆ ಧಿಕ್ಕಾರ’ ಎಂದು ಕಾಂಗ್ರೆಸ್ ಸದಸ್ಯರು ಏಕಾಏಕಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ನಡೆಯಿತು.
ಲೋಕಸಭೆಯಲ್ಲಿ ಬುಧವಾರ ಅಮಿತ್ ಶಾ, ಅಂಬೇಡ್ಕರ್ ಹೆಸರು ಬಳಸುವುದು ಫ್ಯಾಶನ್ ಆಗಿದೆ ಎಂದು ನೀಡಿದ ಹೇಳಿಕೆಯಿಂದ ರಾಜ್ಯದ ವಿವಿಧೆಡೆ ಪ್ರತಿಭಟನೆ ಆರಂಭಗೊಂಡಿದ್ದು, ವಿಧಾನಸಭೆಯಲ್ಲೂ ಕಾಂಗ್ರೆಸ್ ಶಾಸಕರು ಸದನದಲ್ಲೇ ಧಿಕ್ಕಾರ ಕೂಗಿದರು. ಮಾತ್ರವಲ್ಲ,ಒಂದಿಬ್ಬರು ಆಕ್ರೋಶ ವ್ಯಕ್ತಪಡಿಸುವ ಧಾವಂತದಲ್ಲಿ ಸದನದಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಿದರು. ಅಮಿತ್ ಶಾ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಅಮಿತ್ ಶಾ ವಿವಾದಾತ್ಮಕ ಹೇಳಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿತು. ಗಂಭೀರ ವಿಷಯ ಕುರಿತು ಚರ್ಚೆ ನಡೆಯುವ ವೇಳೆ ಕಾಂಗ್ರೆಸ್ ಶಾಸಕರು ಬಾವಿಗಿಳಿದು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಪ್ರದರ್ಶಿಸಿ ದಿಢೀರ್ ಪ್ರತಿಭಟನೆ ನಡೆಸಿ ಅಚ್ಚರಿ ಮೂಡಿಸಿದರು.
ಕಾಂಗ್ರೆಸ್ ಪ್ರತಿಯೊಬ್ಬ ಸದಸ್ಯರೂ ಅಂಬೇಡ್ಕರ್ ಭಾವಚಿತ್ರವನ್ನು ತಮ್ಮ ಆಸನದಲ್ಲಿ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು. ಕೆಲವರು ಬಾವಿಗಿಳಿದು ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪ್ರತಿಭಟನೆಯ ಸುಳಿವನ್ನೂ ಅರಿಯದ ಬಿಜೆಪಿ ಶಾಸಕರು ಬಾಣಂತಿಯರ ಸಾವಿನ ವಿಷಯ ಕುರಿತು ಗಂಭೀರ ಚರ್ಚೆ ನಡೆಸುವ ವೇಳೆ ದಿಢೀರನೇ ನಡೆದ ಈ ಪ್ರತಿಭಟನೆಯಿಂದ ಅವಕ್ಕಾದರು. ಸಭಾಧ್ಯಕ್ಷ ಯು.ಟಿ.ಖಾದರ್ ಸಹ ಯಾವ ಸೂಚನೆ ನೀಡದೇ ಆಸನದಿಂದ ಕೆಳಗಿಳಿದು ಹೊರನಡೆದರು.
ಕಾಂಗ್ರೆಸ್ ಸದಸ್ಯರ ಪ್ರತಿರೋಧ ಹೆಚ್ಚುತ್ತಿದ್ದಂತೆ ಒಬ್ಬೊಬ್ಬರಾಗೇ ಕಾಲು ಕಿತ್ತ ಬಿಜೆಪಿ ಸದಸ್ಯರು, ನಾವು ಸಹ ಅಂಬೇಢ್ಕರ್ ಅಭಿಮಾನಿಗಳೇ. ಅವರ ಹೆಸರಿನಲ್ಲಿ ಕಲಾಪವನ್ನು ಹತ್ತಿಕ್ಕುವ ಕಾರ್ಯ ಕಾಂಗ್ರೆಸ್ ಶಾಸಕರಿಂದ ನಡೆಯುತ್ತಿದೆ ಎಂದು ದೂರಿ, ಹೊರನಡೆದರು.
ಬೈಂದೂರಿನ ಬಿಜೆಪಿ ಶಾಸಕ ಗುರುರಾಜಶೆಟ್ಟಿ ಗಂಟಿಹೊಳಿ ಅವರೊಬ್ಬರೇ ಏಕಾಂಗಿಯಾಗಿ ಅಂಬೇಡ್ಕರ್ ಭಾವಚಿತ್ರ ಹಿಡಿದು, ಅಂಬೇಡ್ಕರ್ ಪರ ಘೋಷಣೆ ಕೂಗಿ ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿರೋಧ ಒಡ್ಡಿದರು. ಏಕಾಂಗಿಯಾಗಿಯೇ ಕಾಂಗ್ರೆಸ್ ಶಾಸಕರ ವಿರುದ್ಧ ಕೆಲ ಕಾಲ ಆಕ್ರೋಶ ವ್ಯಕ್ತಪಡಿಸಿ, ನಂತರ ಅವರು ಕೂಡ ಸದನದಿಂದ ಹೊರನಡೆದರು.