ಪ್ರತಿಪಕ್ಷಗಳ ಬಾಯಿಗೆ ಆಹಾರವಾಗಿದ್ದ ಡಿನ್ನರ್ ಪಾರ್ಟಿಯನ್ನು ಹೈಕಮಾಂಡ್ ಸೂಚನೆ ಮೇರೆಗೆ ಗೃಹ ಸಚಿವ ಜಿ.ಪರಮೇಶ್ವರ್ ರದ್ದುಗೊಳಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಇತ್ತೀಚೆಗೆ ಕಾಂಗ್ರೆಸ್ ಶಾಸಕರೊಂದಿಗೆ ಡಿನ್ನರ್ ಪಾರ್ಟಿ ನಡೆಸಿದ್ದರು. ಇದರ ಬೆನ್ನಲ್ಲೇ ಜಿ.ಪರಮೇಶ್ವರ್ ಕೂಡ ಬುಧವಾರ ಡಿನ್ನರ್ ಪಾರ್ಟಿ ಕರೆದಿರುವುದಾಗಿ ಹೇಳಿಕೊಂಡಿದ್ದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಆರಂಭವಾದ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ಸಚಿವರು ಡಿನ್ನರ್ ಪಾರ್ಟಿ ಕರೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದ್ದು, ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಇದು ಸಿದ್ದರಾಮಯ್ಯಗೆ ಬೀಳ್ಕೊಡುಗೆ ಪಾರ್ಟಿ ಆಗುತ್ತೆ ಎಂದು ಲೇವಡಿ ಮಾಡಿದ್ದರು.
ಪ್ರತಿಪಕ್ಷಗಳ ಆರೋಪ ಹಾಗೂ ಪಕ್ಷದಲ್ಲೇ ಮುಖಂಡರ ಅಸಮಾಧಾನದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ರಾಜ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಡಿನ್ನರ್ ಪಾರ್ಟಿ ರದ್ದುಗೊಳಿಸುವಂತೆ ಸೂಚಿಸಿದ್ದಾರೆ.
ಸುರ್ಜೆವಾಲಾ ಸೂಚನೆ ಬೆನ್ನಲ್ಲೇ ಮಾಧ್ಯಮ ಪ್ರಕಟಣೆ ಹೊರಡಿಸಿದ ಜಿ.ಪರಮೇಶ್ವರ್ ನಾಳೆ ಕರೆಯಲಾಗಿದ್ದ ಡಿನ್ನರ್ ಪಾರ್ಟಿಯನ್ನು ರದ್ದುಗೊಳಿಸಲಾಗಿದ್ದು, ಮುಂದೊಂದು ದಿನ ನಡೆಸುವುದಾಗಿ ತಿಳಿಸಿದರು.